ಸೇವೆಯಲ್ಲಿಯೇ ಸಾರ್ಥಕತೆ ಕಾಣಬೇಕು:ದಿನಕರ

ವಿಜಯಪುರ,ಸೆ.4:ಸೇವಾನಿರತ ನೌಕರರಿಗೆ ನಿವೃತ್ತಿ ಅನಿವಾರ್ಯ. ಆದರೆ ತಮ್ಮ ಸೇವಾವಧಿಯಲ್ಲಿ ಸಲ್ಲಿಸುವ ಸೇವೆ ಇತರರಿಗೆ ಮಾದರಿಯಾಗಿರಬೇಕು ಎಂದು ವಿಜಯಪುರ ಜಿಲ್ಲಾ ಅಂಚೆ ಅಧೀಕ್ಷಕ ಕೆ.ದಿನಕರ ಹೇಳಿದರು. ಅವರು ಗುರುವಾರ ಸಂಜೆ ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಪ್ರಧಾನ ಪೋಸ್ಟ್ ಮಾಸ್ಟರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾದ ಎಸ್.ಕೆ.ಲಾಹೋರಿ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಂಚೆ ಇಲಾಖೆ ಇವತ್ತಿಗೂ ಅನೇಕ ಜನ ಸಾಮಾನ್ಯರ ಪಾಲಿಗೆ ಮಹತ್ವದ ಕೆಲಸ ಮಾಡುತ್ತಿದೆ. ಅಂಚೆ ಇಲಾಖೆಯ ಸೇವೆ ಬಯಸಿ ಬರುವ ಅನೇಕ ಗ್ರಾಹಕರು ಸಂತೃಪ್ತರಾಗಿ ಮರಳುವಂತಹ ಕಾಯಾ, ವಾಚಾ, ಮನಸಾ ಸೇವೆಯನ್ನು ಲಾಹೋರಿ ಅವರು ಮಾಡಿದರು. ಅವರದು ಸಾರ್ಥಕ ಸೇವೆ ಎಂದು ಹೇಳಿದರು. ಸಭೆಯನ್ನುದ್ದೇಶಿಸಿ ಸಹಾಯಕ ಅಂಚೆ ಅಧೀಕ್ಷಕರಾದ ಕೆ. ಶ್ರೀನಿಧಿ, ಎಚ್.ಬಿ.ಹಸಬಿ, ಅಂಚೆ ನಿರೀಕ್ಷಕಿ ಸರೋಜಾ ಇಲಕಲ್ಲ, ಇಬ್ರಾಹಿಂ ಬಿದರಕುಂದಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ನೂತನ ಪೋಸ್ಟ್ ಮಾಸ್ಟರ್ ಎಸ್.ಯು.ಕುಲಕರ್ಣಿ, ಎಸ್.ಬಿ.ಪಾಟೀಲ, ಚಿದಾನಂದ ಶೀಳೀನ, ಬಿ.ಎಸ್.ವಾಮಾ, ಡಿ.ಆರ್.ಚೌಧರಿ, ಸುನೀಲ ದೇಸಾಯಿ ಸೇರಿದಂತೆ ಅಂಚೆ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು. ಸನ್ಮಾನ ಸ್ವೀಕರಿಸಿ ಸೇವೆಯಿಂದ ನಿವೃತ್ತರಾದ ಎಸ್.ಕೆ.ಲಾಹೋರಿ ಮಾತನಾಡಿ, ಅಂಚೆ ಇಲಾಖೆಯಲ್ಲಿ ಸಲ್ಲಿಸಿದ ಸೇವೆ ಸ್ಮರಣಾರ್ಹವಾದುದು. ಅದನ್ನು ಈ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ, ಸೇವಾವಧಿಯಲ್ಲಿ ಸಹಕಾರ, ಮಾರ್ಗದರ್ಶನ ಮಾಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಮಲ್ಲಮ್ಮ ಪಾಟೀಲ ಪ್ರಾರ್ಥಿಸಿದರು. ಶಿವಾನಂದ ದಳವಾಯಿ ಸ್ವಾಗತಿಸಿದರು. ಚಂದ್ರಶೇಖರ ಬಾಗೇವಾಡಿ ನಿರೂಪಿಸಿದರು.







