ಸಿದ್ದರಾಮಯ್ಯ ಸರಕಾರದ ಬರಪೂರ ಕೊಡುಗೆಗಳನ್ನು ಕಂಡು ಬೆಕ್ಕಸ ಬೆರಗಾಗಿದ್ದಾರೆ: ವಿಜಯಕುಮಾರ್

ಚಿಕ್ಕಮಗಳೂರು, ಸೆ.4: ಬಡವರಿಗೆ ಅಕ್ಕಿ ಕೊಟ್ಟದ್ದನ್ನು ಅಪರಾದ ಎಂಬಂತೆ ಕಂಡವರು ನಂತರ ಬರಪೂರ ಕೊಡುಗೆಗಳನ್ನು ಕಂಡು ಬೆಕ್ಕಸ ಬೆರಗಾಗಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಡಿ.ಎಲ್.ವಿಜಯಕುಮಾರ್ ತಿಳಿಸಿದರು.
ಅವರು ತಾಲ್ಲೂಕಿನ ತೊಗರಿಹಂಕಲ್ ಗ್ರಾಪಂ ವ್ಯಾಪ್ತಿಯ ಹೊಸಪೇಟೆಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಿದ್ದರು. ರಾಜ್ಯದ ಗ್ರಾಮೀಣ ಜನರ ಅದರಲ್ಲೂ ದಲಿತರ, ಅಲ್ಪಸಂಖ್ಯಾತರ ಎಲ್ಲಾ ಜಾತಿಯ ಬಡವರ ಭಾಗ್ಯಧಾತ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ. ಶಾಲಾ ಮಕ್ಕಳಿಗೆ ವಿದ್ಯಾಸಿರಿ ಮತ್ತು ಕ್ಷೀರಭಾಗ್ಯ, ಅನ್ನದಾತನಿಗೆ ಸಾಲಭಾಗ್ಯ, 1 ಲೀ ಹಾಲಿಗೆ 5 ರೂ.ಗಳ ಪ್ರೋತ್ಸಾಹದನದಂತಾ ಯೋಜನೆಗಳು ಎಲ್ಲಾ ಜಾತಿಯ ಬಡವರಿಗೆ ಸಿಗುತ್ತಿವೆ ಎಂದು ಹೇಳಿದರು.
ಇಂದು ಕರ್ನಾಟಕದಲ್ಲಿ ಯಾರೊಬ್ಬರು ಹಸಿವಿನಿಂದ ಸತ್ತಿಲ್ಲ. ಬರಗಾಲದ ಮಧ್ಯೆಯೂ ಗ್ರಾಮೀಣ ಜನರು ಗುಳೆ ಹೋಗದಂತೆ, ಉದ್ಯೋಗ ನೀಡುತ್ತಿರುವ ವ್ಯವಸ್ಥೆ ವಿರೋದಿಗಳಿಗೆ ಸುದ್ದಿ ಇಲ್ಲದಂತೆ ಮಾಡಿದ್ದಾರೆ. ತಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ರಾಜ್ಯ ಸರ್ಕಾರದ ಫಲಾನುಭವಿಗಳಾಗಿದ್ದೀರಿ. ಮುಂದಿನ ದಿನಗಳಲ್ಲಿ ನಮ್ಮೆಲ್ಲರನ್ನು ಮತ್ತು ರಾಜ್ಯವನ್ನು ಇನ್ನಷ್ಟು ಎತ್ತರಕ್ಕೆ ಒಯ್ಯಲು ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಬೇಕೆಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಲ್. ಮೂರ್ತಿ ಮಾತನಾಡಿ, ಈ ಕ್ಷೇತ್ರದ ಶಾಸಕ ಸಿ.ಟಿ. ರವಿ ಕಳೆದ 13 ವರ್ಷದಿಂದ ಯಾವುದೇ ಗುರುತರವಾದ ಕೆಲಸ ಮಾಡದೆ, ಡ್ಯಾನ್ಸ್ ಮಾಡಿಕೊಂಡು ಓಡಾಡುತ್ತಿದ್ದಾರೆ ಜನ ಇದನ್ನು ಪ್ರಶ್ನೆಮಾಡಬೇಕು. ಕ್ಷೇತ್ರದ ಗುತ್ತಿಗೆದಾರನಂತೆ ರಾಜಕಾರಣ ಮಾಡುತ್ತಿರುವ ಅವರನ್ನು ಮನೆಗೆ ಕಳಿಸುವ ಕೆಲಸದಲ್ಲಿ ತಾವೆಲ್ಲ ಮುಂದಾಗಬೇಕೆಂದು ಕರೆ ನೀಡಿದರು.
ಮಾಜಿ ಜಿಪಂ ಸದಸ್ಯ ಕೆ.ಮಹಮದ್ ಮಾತನಾಡಿ, ಈ ಭಾಗದ ಜನತೆಗೆ ಶಾಲೆ, ಮೈದಾನ, ಆಸ್ಪತ್ರೆ, ಆಶ್ರಯ ಬಡಾವಣೆ, ಪಂಚಾಯಿತಿ ಕಛೇರಿ, ಸಂತೆ ಎಲ್ಲವೂ ಕಾಂಗ್ರೆಸ್ ಆಡಳಿತದ ದಿನಗಳಲ್ಲಿ ಆದಂತ ಕೆಲಸಗಳು. ಬಿಜೆಪಿಯವರು ನಮ್ಮ ಕೆಲಸಗಳ ಮೇಲೆ ಬೋರ್ಡು ನೇತುಹಾಕುತ್ತಾರೆ. ಇದು ಯುವಜನಾಂಗಕ್ಕೆ ತಿಳಿದಿರಲಿ ಎಂದರು.
ಮುಖಂಡ ಬಿ.ಎಂ. ಸಂದೀಪ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಿ. ಶಿವಾನಂದಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಕೆ.ಎಸ್. ಶಾಂತೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ, ಹೋಬಳಿ ಅಧ್ಯಕ್ಷ ಕುಮಾರ್ ಮಾತನಾಡಿದರು. ನೂರಾರು ಕಾರ್ಯಕರ್ತರು ಮಹಿಳೆಯರು ಭಾಗವಹಿಸಿದ್ದರು. ಇದಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಯಲ್ಲಿ ಪಟಾಕಿ ಸಿಡಿಸಿ ಡೊಳ್ಳು ಭರಿಸುತ್ತಾ ಯುವಕರು ಕಾಂಗ್ರೆಸ್ ಮುಖಂಡರುಗಳನ್ನು ಸ್ವಾಗತಿಸಿದರು.
ಪಕ್ಷದ ಮುಖಂಡರುಗಳಾದ ಪವನ್, ಆನಂದ್, ಹೆಬ್ಬಳ್ಳಿ ನಾಗೇಶ್ ಸಂದೇಶ್. ಕಾರ್ತಿಕ್ ಚೆಟ್ಟಿಯಾರ್ ಲೋಕೇಶ್ ಫಾತಿಮಾ ತಿಮ್ಮಯ್ಯ ದಿನೇಶ್ ಜಯರಾಮ್ ಮತ್ತಿತರಿದ್ದರು. ಗ್ರಾಪಂ ಸದಸ್ಯ ಸುರೇಶ್ ಸ್ವಾಗತಿಸಿದರೆ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿಲ್ವರ್ ಸ್ಟರ್ ನಿರೂಪಿಸಿದರು.







