ಡಿ.ದೇವರಾಜ್ ಅರಸ್ ಅವರ ದಕ್ಷ ರಾಜಕಾರಣ ಇಂದು ಕಾಣಲು ಸಾಧ್ಯವಾಗುತ್ತಿಲ್ಲ: ಬಿ.ಬಿ.ನಿಂಗಯ್ಯ

ಮೂಡಿಗೆರೆ, ಸೆ.4: ಹಸುಗಳ ಹಾಲು ಕರೆದು ಮಾರಾಟ ಮಾಡಿ ರಾಜಕಾರಣ ಮಾಡಿದ ಸಾಮಾಜಿಕ ಪರಿವರ್ತನೆ ಹರಿಕಾರ ಡಿ.ದೇವರಾಜ್ ಅರಸ್ ಅವರಿಗೆ ಸರಿಸಾಟಿಯಾದ ಮತ್ತೊಂದು ರಾಜಕಾರಣ ಇಂದಿನವರೆಗೂ ಹುಟ್ಟಲಿಲ್ಲ ಎಂದು ಶಾಸಕ ಬಿ.ಬಿ.ನಿಂಗಯ್ಯ ಅಭಿಪ್ರಾಯಪಟ್ಟರು.
ಅವರು ಸೋಮವಾರ ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ದಿವಂಗತ ಡಿ.ದೇವರಾಜ್ ಅರಸ್ ಅವರ 102ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ದಕ್ಷ ಪ್ರಾಮಾಣಿಕರಾಗಿದ್ದ ಅರಸ್ ಬಳಿ ಬಡವನೊಬ್ಬ ಸರಕಾರಿ ಕೆಲಸ ಕೇಳಿಕೊಂಡು ಹೋದಾಗ ಸಿಗರೇಟ್ ಪ್ಯಾಕ್‍ನ ಲೇಬಲ್ ಮೇಲೆ ಸರಕಾರ ಕೆಲಸದ ಆದೇಶವನ್ನೇ ಬರೆದು ಕೊಟ್ಟಿದ್ದರು. ಇಂತಹ ಮಹಾನ್ ನಾಯಕನನ್ನು ರಾಜ್ಯ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಕೊಂಡಾಡಿದರು.
1978 ರಲ್ಲಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ದಿವಂಗತ ಇಂದಿರಾಗಾಂಧಿ ಅವರ ಎದುರು ಚುನಾವಣೆ ಸ್ಪರ್ಧಿಸಿದ್ದರು. ಆಗ 71 ಮಂದಿ ಪ್ರತಿಸ್ಪರ್ಧಿಯಾಗಿದ್ದರು. ಅರಸು ಅವರು ಸ್ಪರ್ಧಿಸಿದ್ದು, ಸೋಲು ಗೆಲುವು ಎಂಬ ಲೆಕ್ಕಾಚಾರಕ್ಕೆ ಆಗಿರಲಿಲ್ಲ. ತಮ್ಮ ಶುದ್ಧ ಪ್ರಾಮಾಣಿಕ ಶೈಲಿಯಿಂದ ಸೋಲನ್ನು ಅನುಭವಿಸಬೇಕಾಯಿತು. ಆದರೂ ದೃತಿಗೆಡದ ಅವರು, ಜಿಲ್ಲೆಯಲ್ಲಿ ಸ್ಪರ್ಧಿಸಿದ್ದೇ ಸಾಧನೆ ಎಂದುಕೊಂಡಿದ್ದರು ಎಂದು ತಿಳಿಸಿದರು.
ತಾಪಂ ಅಧಕ್ಷ ಕೆ.ಸಿ.ರತನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಸರಕಾರಿ ಹಾಸ್ಟೆಲ್, ವಿದ್ಯಾರ್ಥಿ ವೇತನ ಮತ್ತಿತರ ಸವಲತ್ತುಗಳನ್ನು ದೇವರಾಜ್ ಅರಸ್ ಅವರು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದಿದ್ದರು. ಅವರ ಸಾಮಾಜಿಕ ಕಳಕಳಿ ಇಂದಿಗೂ ಶಾಶ್ವತವಾಗಿ ಜೀವಂತವಾಗಿದೆ. ಅವರು ಎಂದೂ ಶ್ರೀಮಂತರ ಪರ ನಿಂತವರಲ್ಲ. ಅವರ ಹೃದಯ ಶ್ರೀಮಂತಿಕೆಯನ್ನು ಮರೆ ಮಾಚಲು ಸಾಧ್ಯವೇ ಇಲ್ಲ ಎಂದು ಕೊಂಡಾಡಿದರು.
ಈ ವೇಳೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ಮತ್ತು ಪ್ರೋತ್ಸಾಹ ಧನ ನೀಡಲಾಯಿತು. ನಿವೇಶನ ರಹಿತ ಫಲಾನುಭವಿಗಳಿಗೆ ತಾಪಂ ನಿಂದ ಹಕ್ಕು ಪತ್ರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ನಂದಕುಮಾರ್, ತಾಪಂ ಇ.ಓ.ತಾರನಾಥ್, ಹಿಂದುಳಿದ ವರ್ಗಗಳ ಇಲಾಖೆ ವಿಸ್ತರಣಾ ಅಧಿಕಾರಿ ರಾಜೇಶ್, ಕಿರುಗುಂದ ಗ್ರಾಪಂ ಉಪಾಧ್ಯಕ್ಷ ಚಂದ್ರಶೇಖರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಧನಂಜಯ ಮತ್ತಿತರರಿದ್ದರು.







