ಆಪ್ತ ಬಂಡವಾಳಶಾಹಿತ್ವಕ್ಕೆ ಮೋದಿ ಸರಕಾರದ ಬೆಂಬಲ: ರಾಹುಲ್

ಅಹ್ಮದಾಬಾದ್, ಸೆ.4: ನರೇಂದ್ರ ಮೋದಿ ಸರಕಾರ ಸಣ್ಣ ಮತ್ತು ಮಧ್ಯಮ ವರ್ಗದ ಉದ್ದಿಮೆಗಳನ್ನು ಸಂಪೂರ್ಣವಾಗಿ ಕಡೆಗಣಿಸಿದ್ದು ಆಪ್ತ ಬಂಡವಾಳಶಾಹಿತ್ವಕ್ಕೆ ಬೆಂಬಲ ನೀಡುತ್ತಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಗುಜರಾತ್‌ನಲ್ಲಿ ರೈತರ ಸಾಲ ಸುಮಾರು 36,000 ಕೋಟಿ ರೂ. ಇದೆ. ಆದರೆ ಟಾಟಾ ನ್ಯಾನೊಗೆ 0.01 ಶೇಕಡಾ ಬಡ್ಡಿದರದಲ್ಲಿ 60,000 ಕೋಟಿ ರೂ.ನಷ್ಟು ಮೊತ್ತದ ಸಾಲ ನೀಡಲಾಗಿದೆ. ಗುಜರಾತ್‌ನಲ್ಲಿ ಒಂದಾದರೂ ನ್ಯಾನೊ ಕಾರನ್ನು ನೀವು ನೋಡಿದ್ದೀರಾ. ಈ ಸಂಸ್ಥೆಯಲ್ಲಿ ಎಷ್ಟು ಯುವಜನತೆ ಉದ್ಯೋಗ ಪಡೆದಿದ್ದಾರೆ ಎಂದು ರಾಹುಲ್ ಪ್ರಶ್ನಿಸಿದರು.
ಮೋದಿ ಸರಕಾರ ಸುಮಾರು 50ರಷ್ಟು ಆಯ್ದ ಕಾರ್ಪೊರೇಟ್ ಸಂಸ್ಥೆಗಳ ಹಿತಾಸಕ್ತಿಗೇ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ರಾಹುಲ್ ಒತ್ತಿ ಹೇಳಿದರು. ಅಹ್ಮದಾಬಾದ್‌ನ ಸಾಬರ್‌ಮತಿಯಲ್ಲಿ ಪಕ್ಷದ ಬೃಹತ್ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಬಿಜೆಪಿಯ ಕುರಿತು ಹೆಚ್ಚಿನ ಮಾಧ್ಯಮಗಳು ಪಕ್ಷಪಾತ ತೋರುತ್ತಿರುವ ಕುರಿತು ಪಕ್ಷದ ಕಾರ್ಯಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಹುಲ್, ನರೇಂದ್ರ ಮೋದಿಯ ಸುಮಾರು ಏಳು ಕಾರ್ಪೊರೇಟ್ ಮಿತ್ರರು ಮಾಧ್ಯಮ ಕ್ಷೇತ್ರವನ್ನು ನಿಯಂತ್ರಿಸುತ್ತಿದ್ದಾರೆ . ಇದೇ ‘ಮಿತ್ರಕೂಟ’ ರೈತರ , ಬುಡಕಟ್ಟು ಜನರ, ಕಾರ್ಮಿಕರ ಹಾಗೂ ಮಧ್ಯಮ ವರ್ಗದ ಕೈಗಾರಿಕೆಗಳ ಬೆನ್ನೆಲುಬು ಮುರಿಯುತ್ತಿದೆ ಎಂದರು.
ಗುಜರಾತ್‌ನಲ್ಲಿ ಪಕ್ಷವನ್ನು ಬಲಪಡಿಸುವ ಉದ್ದೇಶದಿಂದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡಿರುವ ರಾಹುಲ್ ಗಾಂಧಿ, ಮುಂಬರುವ ವಿಧಾನಸಭೆ ಚುನಾವಣೆಯ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದರು.







