ಮೌಢ್ಯಾಚರಣೆ ಪ್ರತಿಬಂಧಕ ಕಾಯ್ದೆಗೆ ಪ್ರಗತಿಪರ ಮಠಾಧೀಶರ ಒತ್ತಾಯ
ಸರಕಾರಕ್ಕೆ ಮೂರು ದಿನಗಳ ಗಡುವು ನೀಡಿದ ಚೆನ್ನಮಲ್ಲ ಸ್ವಾಮೀಜಿ
ಬೆಂಗಳೂರು, ಸೆ.4: ಮೌಢ್ಯಾಚರಣೆ ಪ್ರತಿಬಂಧಕ ಕಾಯ್ದೆ ಜಾರಿ ಕುರಿತು ರಾಜ್ಯ ಸರಕಾರ ಖಚಿತ ಹಾಗೂ ಲಿಖಿತ ಭರವಸೆ ನೀಡದ ಹೊರತು ಧರಣಿಯನ್ನು ನಿಲ್ಲಿಸುವುದಿಲ್ಲ ಹಾಗೂ ಮಠಗಳಿಗೆ ಹಿಂದಿರುಗುವುದಿಲ್ಲ ಎಂದು ನಿಡುಮಾಮಿಡಿ ಮಠದ ಚೆನ್ನಮಲ್ಲ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ಪ್ರಗತಿಪರ ಮಠಾಧೀಶರ ವೇದಿಕೆ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಮೌಢ್ಯಾಚರಣೆ ಪ್ರತಿಬಂಧಕ ಕಾಯ್ದೆ ಜಾರಿಗೆ ಒತ್ತಾಯಿಸಿ ಆಯೋಜಿಸಿರುವ ಧರಣಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಳೆದ 4ವರ್ಷದಿಂದ ಮೌಢ್ಯಾಚರಣೆ ಪ್ರತಿಬಂಧಕ ಕಾಯ್ದೆ ಜಾರಿ ಮಾಡಬೇಕೆಂದು ಒತ್ತಾಯಿಸಿ ನೂರಾರು ಸಾರ್ವಜನಿಕ ಸಭೆಗಳನ್ನು ಏರ್ಪಡಿಸಿ ಸರಕಾರವನ್ನು ಒತ್ತಾಯಿಸಲಾಗಿದೆ. ಆದರೆ, ಸರಕಾರ ಇಲ್ಲಿಯವರೆಗೂ ಕೇವಲ ಭರವಸೆಗಳನ್ನು ನೀಡುತ್ತಾ ಕಾಲಹರಣ ಮಾಡಿದೆ. ಹೀಗಾಗಿ ಇಂದಿನಿಂದ ಬುಧವಾರದವರೆಗೆ ಮೌಢ್ಯಾಚರಣೆ ಪ್ರತಿಬಂಧಕ ಕಾಯ್ದೆಗೆ ಒತ್ತಾಯಿಸಿ ಧರಣಿ ನಡೆಸುತ್ತಿದ್ದೇವೆ. ಈ ಮೂರು ದಿನದೊಳಗೆ ಸರಕಾರ ಕಾಯ್ದೆ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ಅವರು ಹೇಳಿದರು.
ಹಾಗೆ ನೋಡಿದರೆ ಸಾವಿರಾರು ವರ್ಷಗಳ ಹಿಂದೆಯೇ ಲೋಕಾಯಕ್ತರು ಕಂದಾಚಾರದ ವಿರುದ್ಧ ಸಮರ ಸಾರಿದ್ದರು. ಅಲ್ಲಿಂದ ಪ್ರಾರಂಭಗೊಂಡು ಶರಣರು, ವಚನಕಾರರವರೆಗೆ ಮೌಢ್ಯಾಚರಣೆ ವಿರುದ್ಧ ಜನತೆಯಲ್ಲಿ ಜಾಗೃತಿ ಮೂಡಿಸುತ್ತಾ ಬರಲಾಗಿದೆ. ಹಾಗೆಯೇ ಪಂಪನಿಂದ ಕುವೆಂಪುವರೆಗಿನ ಸಾಹಿತ್ಯವು ಕೂಡ ಕಂದಾಚಾರದ ವಿರುದ್ಧ ಜನತೆಯಲ್ಲಿ ವೈಜ್ಞಾನಿಕ ಮನಸ್ಥಿತಿಯನ್ನು ಮೂಡಿಸುವಂತಹ ಬರಹಗಳಾಗಿವೆ. ಹೀಗಾಗಿ ಈಗಿನ ಪ್ರಜಾಪ್ರಭುತ್ವ ಯುಗದಲ್ಲಿ ಮೌಢ್ಯಾಚರಣೆ ತಡೆಗೆ ಕಾಯ್ದೆ ರೂಪಿಸಿ ಜನರಲ್ಲಿ ಅರಿವು ಮೂಡಿಸುವುದು ಸರಕಾರದ ಜವಾಬ್ದಾರಿ ಎಂದು ಅವರು ತಿಳಿಸಿದರು.
ಸದ್ಯ ಸರಕಾರ ರೂಪಿಸಿರುವ ಮೌಢ್ಯಾಚರಣೆ ಪ್ರತಿಬಂಧಕ ಕಾಯ್ದೆಯ ಕರಡಿನಲ್ಲಿ ಎಡೆಸ್ನಾನ ಹಾಗೂ ಪಂಕ್ತಿ ಭೇದವನ್ನು ಸೇರಿಸಿಲ್ಲದಿರುವುದು ಆಘಾತಕಾರಿ ಅಂಶವಾಗಿದೆ. ಮನುಷ್ಯನ ಘನತೆಯನ್ನು ಕುಗ್ಗಿಸುವಂತಹ ಎಡೆಸ್ನಾನ ಹಾಗೂ ಪಂಕ್ತಿಭೇದ ನಿಷೇಧವನ್ನು ಮೌಢ್ಯಾಚರಣೆ ಪ್ರತಿಬಂಧಕ ಕಾಯ್ದೆಯಲ್ಲಿ ಮೊದಲ ಆದ್ಯತೆಯಾಗಿ ತೆಗೆದುಕೊಳ್ಳಬೇಕು ಎಂದು ಅವರು ಸರಕಾರಕ್ಕೆ ಮನವಿ ಮಾಡಿದರು.
ಜ್ಯೋತಿಷ್ಯ ಗ್ರಾಹಕ ಕಾಯ್ದೆಗೆ ಒಳಪಡಲಿ:ಮಾನವನ ಜ್ಞಾನಶಕ್ತಿ ಹಾಗೂ ಕ್ರಿಯಾಶಕ್ತಿಯನ್ನು ನಗಣ್ಯಮಾಡಿ ಮೂಢಾಚರಣೆಯನ್ನು ಬಿತ್ತುವಂತಹ ನಕಲಿ ಜ್ಯೋತಿಷಿಗಳ ಸಂಖ್ಯೆ ಹೆಚ್ಚುತ್ತಿದೆ. ಈ ಆಧುನಿಕ ಜ್ಯೋತಿಷಿಗಳು ಸಾಮಾನ್ಯ ವ್ಯಕ್ತಿಯಿಂದ 25ರಿಂದ 50ಸಾವಿರ ರೂ.ವರೆಗೆ ಹಣವನ್ನು ವಸೂಲಿ ಮಾಡುತ್ತಿದ್ದಾರೆ. ಹೀಗಾಗಿ ಜ್ಯೋತಿಷಿಗಳನ್ನು ಗ್ರಾಹಕ ಕಾಯ್ದೆಗೆ ಒಳಪಡಿಸಬೇಕು. ಆಗ ಅವರ ಬಣ್ಣ ಬಯಲಾಗುತ್ತದೆ ಎಂದು ಅವರು ಹೇಳಿದರು.
ನಿವೃತ್ತ ನ್ಯಾ.ನಾಗಮೋಹನ ದಾಸ್ ಮಾತನಾಡಿ, ಸಾವಿರಾರು ವರ್ಷಗಳಿಂದಲೂ ವೌಢ್ಯಾಚರಣೆಯ ವಿರುದ್ಧ ಹೋರಾಟ ಮಾಡಿದ ಲಕ್ಷಾಂತರ ಮಂದಿ ಹತ್ಯೆಯಾಗಿದ್ದಾರೆ. ಇತ್ತೀಚೆನ ವರ್ಷಗಳಲ್ಲಿ ನರೇಂದ್ರ ದಾಬೋಲ್ಕರ್, ಗೋವಿಂದ್ ಪನ್ಸಾರಿ ಹಾಗೂ ನಮ್ಮದೆ ರಾಜ್ಯದ ಎಂ.ಎಂ.ಕಲಬುರ್ಗಿಯ ಹತ್ಯೆಯಾಗಿದೆ. ಇನ್ನಷ್ಟು ಹತ್ಯೆಗಳನ್ನು ತಡೆಯಬೇಕಾದರೆ ಮೌಢ್ಯಾಚರಣೆ ಪ್ರತಿಬಂಧಕ ಕಾಯ್ದೆ ಜಾರಿಯಾಗುವುದು ತುರ್ತು ಅಗತ್ಯವಾಗಿದೆ ಎಂದು ಅವರು ಹೇಳಿದರು.
ಧರಣಿಯಲ್ಲಿ ಸಾಣೇಹಳ್ಳಿ ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ, ಕುಂಚಟಿಗರ ಗುರುಪೀಠದ ಶಾಂತವೀರ ಸ್ವಾಮೀಜಿ, ಸೂಫಿ ಸಂತರಾದ ಹಜರತ್ ಅತಾವುಲ್ಲಾ ಚಿಸ್ತಿ, ಹಜರತ್ ಖ್ವಾಜಾ ಅಜೀಂ ಅಲಿಷಾ ಚಿಸ್ತಿ, ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಹಿರಿಯ ಸಾಹಿತಿಗಳಾದ ಬರಗೂರು ರಾಮಚಂದ್ರಪ್ಪ, ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ವಿ.ಗೀತಾ, ನಿವೃತ್ತ ನ್ಯಾ.ವಿ.ಗೋಪಾಲಗೌಡ, ಡಾ.ಬಿ.ಟಿ.ಲಲಿತಾ ನಾಯಕ್, ಕುಂ.ವೀರಭದ್ರಪ್ಪ, ಕೆ.ಎಸ್.ಭಗವಾನ್, ಪ್ರೊ.ನರಸಿಂಹಯ್ಯ ಮತ್ತಿತರರಿದ್ದರು.
ವಿಶೇಷ ಅಧಿವೇಶನ ಕರೆಯಲಿ
ಮೌಢ್ಯಾಚರಣೆ ಪ್ರತಿಬಂಧಕ ಕಾಯ್ದೆ ಜಾರಿಗೆ ಒತ್ತಾಯಿಸಿ ಪ್ರತಿಭಟಿಸಿದಾಗಲೆಲ್ಲ ಸರಕಾರ ಮುಂದಿನ ಅಧಿವೇಶನದಲ್ಲಿ ಜಾರಿ ಮಾಡುತ್ತೇವೆ ಎಂದು ಸುಳ್ಳು ಭರವಸೆ ನೀಡುತ್ತಾ ಬಂದಿದೆ. ಇನ್ನು ಮುಂದೆ ಇಂತಹ ಸುಳ್ಳು ಭರವಸೆಗಳನ್ನು ನಂಬಲು ಸಿದ್ಧರಿಲ್ಲ. ಹೀಗಾಗಿ ಕಾಯ್ದೆಯ ಕುರಿತು ಚರ್ಚಿಸಿ ಅನುಮೋದಿಸಲು ಮೂರು ದಿನಗಳ ವಿಶೇಷ ಅಧಿವೇಶನವನ್ನು ಕೂಡಲೇ ಕರೆಯಬೇಕು.







