ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ : ಶಿವಮೊಗ್ಗದಲ್ಲಿ ಬಿಗಿ ಪೊಲೀಸ್ ಪಹರೆ
ಮಂಗಳವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಶಿವಮೊಗ್ಗ, ಸೆ. 4: ನಗರದ ಭೀಮೇಶ್ವರ ದೇವಾಲಯ ಆವರಣದಲ್ಲಿ ಹಿಂದೂ ಮಹಾಮಂಡಲದವತಿಯಿಂದ ಪ್ರತಿಷ್ಠಾಪಿಸಲಾಗಿರುವ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ಪೂರ್ವ ಮೆರವಣಿಗೆ ಮಂಗಳವಾರ ನಡೆಯಲಿದೆ. ಇದಕ್ಕಾಗಿ ನಗರಾದ್ಯಂತ ಬಿಗಿ ಪೊಲೀಸ್ ಪಹರೆಯ ವ್ಯವಸ್ಥೆ ಮಾಡಲಾಗಿದೆ. ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ.
ಶನಿವಾರ ರಾತ್ರಿ ನಗರದ ಓ.ಟಿ. ರಸ್ತೆ ಹಾಗೂ ಗೋಪಾಳದ ಶ್ರೀರಾಮನಗರ ಬಡಾವಣೆಯಲ್ಲಿ ಗಣಪತಿಗಳ ವಿಸರ್ಜನೆ ವೇಳೆ ನಡೆದ ಕೆಲ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ, ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ಪೂರ್ವ ಮೆರವಣಿಗೆಯ ಮೇಲೆ ಪೊಲೀಸ್ ಇಲಾಖೆಯು ಹದ್ದಿನ ಕಣ್ಗಾವಲಿಟ್ಟಿದೆ. ಭಾನುವಾರದಿಂದಲೇ ನಗರದ ಆಯಕಟ್ಟಿನ, ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಪಹರೆ ಹಾಕಿದೆ.
ಭದ್ರತಾ ಕಾರ್ಯಕ್ಕೆ 2000 ಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಗುತ್ತಿದೆ. ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆಗಳಿಂದಲೂ ಹೆಚ್ಚುವರಿ ಪೊಲೀಸ್ ಪಡೆಯನ್ನು ಭದ್ರತಾ ಕಾರ್ಯಕ್ಕೆ ಕರೆಯಿಸಿಕೊಳ್ಳಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತವು ಮಂಗಳವಾರ ನಗರದ ಎಲ್ಲ ಶಾಲಾ - ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ. ಕೆಲ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರದ ಮೇಲೆ ನಿರ್ಬಂಧ ಹೇರಿದೆ.
ತಪಾಸಣೆ: ನಗರದ ಹೊರವಲಯಗಳ ಪ್ರಮುಖ ರಸ್ತೆಗಳಲ್ಲಿ ತಾತ್ಕಾಲಿಕ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗುತ್ತಿದ್ದು, ನಗರ ಪ್ರವೇಶಿಸುವ ಪ್ರತಿಯೊಂದು ವಾಹನಗಳ ತಪಾಸಣೆಗೊಳಪಡಿಸಿ ಮಾಹಿತಿ ಸಂಗ್ರಹಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಅನುಮಾನಾಸ್ಪದ ವ್ಯಕ್ತಿಗಳ ಚಲನವಲನಗಳ ಮೇಲೆ ನಿಗಾವಹಿಸಿದೆ.
ಗಣಪತಿಯ ಮೆರವಣಿಗೆಯಲ್ಲಿ ಕಿಡಿಗೇಡಿಗಳ ದುಷ್ಕøತ್ಯಕ್ಕೆ ಆಸ್ಪದವಾಗದಂತೆ ಕಟ್ಟೆಚ್ಚರವಹಿಸಲಾಗಿದೆ. ಮೆರವಣಿಗೆಯ ಪ್ರತಿ ಹಂತವನ್ನು ವೀಡಿಯೋ ಚಿತ್ರೀಕರಣ ನಡೆಸಲಾಗುತ್ತಿದೆ. ಇದಕ್ಕಾಗಿಯೇ 103 ವೀಡಿಯೋ ಕ್ಯಾಮರಾ ಬಳಕೆ ಮಾಡಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮಫ್ತಿ ಪೊಲೀಸರನ್ನು ನಿಯೋಜನೆ ಮಾಡಲಾಗುತ್ತಿದೆ.
ಮೆರವಣಿಗೆ ಸಾಗುವ ರಸ್ತೆಗಳಲ್ಲಿ ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ಸಿ. ಸಿ. ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಎಸ್.ಪಿ. ಕಚೇರಿಯಲ್ಲಿಯೇ ಸಿ. ಸಿ. ಕ್ಯಾಮರಾಗಳಲ್ಲಿ ದಾಖಲಾಗುವ ಲೈವ್ ದೃಶ್ಯಾವಳಿ ವೀಕ್ಷಿಸಿ, ಘಟನಾವಳಿಗಳ ಪರಿಶೀಲನೆ ನಡೆಸುವ ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸ್ ಇಲಾಖೆಯ ಮೂಲಗಳು ಮಾಹಿತಿ ನೀಡುತ್ತವೆ.
ನಿಯೋಜನೆ: ಸೋಮವಾರ ನಗರದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆಯವರು ಸುದ್ದಿಗಾರರೊಂದಿಗೆ ಮಾತನಾಡಿದರು. 'ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ಪೂರ್ವ ಮೆರವಣಿಗೆಯನ್ನು ಶಾಂತಿಯುತವಾಗಿ ನಡೆಸಲು ಜಿಲ್ಲಾ ಪೊಲೀಸ್ ಇಲಾಖೆ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಬಂದೋಬಸ್ತ್‍ಗಾಗಿ ಮೂವರು ಹೆಚ್ಚುವರಿ ಪೊಲೀಸ್ ಅಧಿಕಾರಿಗಳು, 12 ಡಿಎಸ್‍ಪಿಗಳು, 23 ಸಿಪಿಐ, 55 ಪಿಎಸ್‍ಐ, 160 ಎಎಸ್‍ಐ, 1548 ಪೊಲೀಸ್ ಸಿಬ್ಬಂದಿ ಮತ್ತು 650 ಗೃಹರಕ್ಷಕ ದಳದ ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದರ ಹೊರತಾಗಿ 12 ಕೆಎಸ್‍ಆರ್‍ಪಿ ಪಡೆ, ಡಿಎಆರ್ ತುಕುಡಿಗಳು, ಒಂದು ಆರ್‍ಐವಿ ಪಡೆ, ಎರಡು ಎಎನ್‍ಎಸ್ ಪಡೆ, ಒಂದು ಕ್ಯೂಆರ್‍ಟಿ ಪಡೆ, ಒಂದು ಡಿಸ್ವಾಟ್ ತಂಡವನ್ನು ನಿಯೋಜಿಸಲಾಗಿದೆ. ಇನ್ನೂ ಐದು ಕೆಎಸ್‍ಆರ್‍ಪಿ ತುಕಡಿಗಳನ್ನು ನೀಡುವಂತೆ ಕೋರಲಾಗಿದೆ ಎಂದು ತಿಳಿಸಿದ್ದಾರೆ.
ವದಂತಿಗಳಿಗೆ ಕಿವಿಗೊಡದಂತೆ ಮನವಿ
'ಸಾರ್ವಜನಿಕರು ಯಾವುದೇ ರೀತಿಯ ವದಂತಿಗಳಿಗೆ ಕಿವಿಗೊಡಬಾರದು. ಕಾನೂನು - ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಗೆ ಸೂಕ್ತ ಸಹಕಾರ ನೀಡಬೇಕು. ನಗರದಲ್ಲಿ ಶಾಂತಿಯ ವಾತಾವರಣವಿದ್ದು, ಆತಂಕ ಪಡುವ ಅಗತ್ಯವಿಲ್ಲವಾಗಿದೆ. ಸಾಮಾಜಿಕ ಸಂಪರ್ಕ ಜಾಲ ತಾಣಗಳ ಮೂಲಕ ಸುಳ್ಳು ಸಂದೇಶ ರವಾನಿಸುವವರ ವಿರುದ್ದ ಕ್ರಮ ಜರುಗಿಸಲಾಗುವುದು. ಗ್ರೂಪ್ ಅಡ್ಮಿನ್‍ಗಳ ಮೇಲೆ ಕ್ರಮಕೈಗೊಳ್ಳಲಾಗುವುದು' ಎಂದು ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ ಎಚ್ಚರಿಕೆ ನೀಡಿದ್ದಾರೆ.
ಅಪರಾಧ ಪ್ರವೃತ್ತಿಯ ಐವರ ಗಡಿಪಾರು
ಹಿಂದೂ ಮಹಾಸಭಾ ಗಣಪತಿಯ ಮೆರವಣಿಗೆ ಹಿನ್ನೆಲೆಯಲ್ಲಿ ಅಪರಾಧ ಪ್ರವೃತ್ತಿ ಹಿನ್ನೆಲೆಯ ಐವರನ್ನು ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ. ನಗರಾದ್ಯಂತ ಗಸ್ತು ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ. ಪೊಲೀಸ್ ಇಲಾಖೆಯ ವಾಹನಗಳ ಜೊತೆಗೆ ಇತರೆ ಇಲಾಖೆ ಹಾಗೂ ಖಾಸಗಿ ವಾಹನಗಳನ್ನು ಕೂಡ ಭದ್ರತಾ ಕಾರ್ಯಕ್ಕೆ ಪೊಲೀಸ್ ಇಲಾಖೆ ಬಳಕೆ ಮಾಡಿಕೊಂಡಿದೆ.
ಮೆರವಣಿಗೆ ಸಾಗುವ ವಿವರ
ಬೆಳಿಗ್ಗೆ 11 ಗಂಟೆ ಸುಮಾರಿಗೆ ಭೀಮೇಶ್ವರ ದೇವಾಲಯ ಆವರಣದಿಂದ ಗಣಪತಿಯ ವಿಸರ್ಜನಾ ಪೂರ್ವ ಮೆರವಣಿಗೆ ಆರಂಭವಾಗಲಿದೆ. ಎಸ್.ಪಿ.ಎಂ. ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್ ವೃತ್ತ, ಗಾಂಧಿಬಜಾರ್, ಶಿವಪ್ಪನಾಯಕ ವೃತ್ತ, ಅಮೀರ್ ಅಹಮದ್ ಸರ್ಕಲ್, ನೆಹರೂ ರಸ್ತೆ, ಗೋಪಿ ವೃತ್ತ, ದುರ್ಗಿಗುಡಿ ರಸ್ತೆ, ಜೈಲ್ ವೃತ್ತ, ಕುವೆಂಪು ರಸ್ತೆ, ಶಿವಮೂರ್ತಿ ವೃತ್ತ, ಸವಳಂಗ ರಸ್ತೆ, ಮಹಾವೀರ ವೃತ್ತ, ಡಿ.ವಿ.ಎಸ್. ಕಾಲೇಜು ರಸ್ತೆ, ಕಾನ್ವೆಂಟ್ ರಸ್ತೆ, ಕೋಟೆ ರಸ್ತೆಯ ಮೂಲಕ ಭೀಮೇಶ್ವರ ದೇವಾಲಯ ಸಮೀಪದ ತುಂಗಾ ನದಿಯಲ್ಲಿ ವಿಸರ್ಜನೆ ಮಾಡಲಾಗುತ್ತದೆ.







