'ಬಸ್ ನಿಲ್ದಾಣ ಸ್ಥಳಾಂತರಿಸಿ, ಸ್ಕೈ ವಾಕ್ ನಿರ್ಮಿಸಿ': ಬಸ್ ಮಾಲೀಕರ ಸಂಘದ ಗೌರವಾಧ್ಯಕ್ಷ ಪಿ. ರುದ್ರೇಶ್ ಸಲಹೆ

ಶಿವಮೊಗ್ಗ, ಸೆ. 4: 'ನಗರದ ಉಷಾ ನರ್ಸಿಂಗ್ ಹೋಂ ವೃತ್ತದ ಬಳಿ ವಿನೋಬನಗರಕ್ಕೆ ತೆರಳುವ ರಸ್ತೆಯ ಎಡ ಬದಿಯಲ್ಲಿರುವ ಬಸ್ ನಿಲ್ದಾಣ ಸ್ಥಳಾಂತರಕ್ಕೆ ತತ್‍ಕ್ಷಣವೇ ಕ್ರಮಕೈಗೊಳ್ಳಬೇಕು. ಅತ್ಯದಿಕ ಜನ, ವಾಹನ ದಟ್ಟಣೆಯಿರುವ ಗೋಪಿ ವೃತ್ತದಲ್ಲಿ ಸ್ಕೈ ವಾಕ್ ನಿರ್ಮಾಣ ಮಾಡಬೇಕೆಂದು' ಸಿಟ ಬಸ್ ಮಾಲೀಕರ ಸಂಘದ ಗೌರವಾಧ್ಯಕ್ಷ ಹಾಗೂ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಖಜಾಂಚಿ ಪಿ. ರುದ್ರೇಶ್ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ಸೋಮವಾರ ನಗರದ ಡಿ.ಸಿ. ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಸಲಹೆ ನೀಡಿದ್ದಾರೆ.
ಉಷಾ ನರ್ಸಿಂಗ್ ಹೋಂ ವೃತ್ತದ ಸಮೀಪವೇ ಬಸ್ ನಿಲ್ದಾಣವಿದೆ. ಇಲ್ಲಿ ಬಸ್‍ಗಳು ನಿಲುಗಡೆ ಮಾಡುವುದರಿಂದ ತೀವ್ರ ಸ್ವರೂಪದ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಜೊತೆಗೆ ಸಣ್ಣಪುಟ್ಟ ಅಪಘಾತಗಳಿಗೂ ಕಾರಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಬಸ್ ನಿಲ್ದಾಣವನ್ನು ಕೊಂಚ ದೂರಕ್ಕೆ ಸ್ಥಳಾಂತರಿಸಿದರೆ ಸುಗಮ ವಾಹನ ಸಂಚಾರಕ್ಕೆ ಅವಕಾಶವಾಗಲಿದೆ ಎಂದು ತಿಳಿಸಿದ್ದಾರೆ.
ಗೋಪಿ ವೃತ್ತದಲ್ಲಿ ಜನ ಹಾಗೂ ವಾಹನ ಸಂಚಾರ ದಟ್ಟಣೆ ಹೆಚ್ಚಿದೆ. ಸುತ್ತಮುತ್ತಲು ಶಾಲಾ - ಕಾಲೇಜುಗಳಿರುವುದರಿಂದ ವಿದ್ಯಾರ್ಥಿಗಳ ಓಡಾಟವಿದೆ. ಈ ಹಿನ್ನೆಲೆಯಲ್ಲಿ ಈ ವೃತ್ತದಲ್ಲಿ ಸ್ಕೈ ವಾಕ್ ನಿರ್ಮಾಣ ಮಾಡಿದರೆ ಪಾದಚಾರಿಗಳಿಗೆ ಸಾಕಷ್ಟು ಅನುಕೂಲವಾಲಿಗದೆ ಎಂದರು.
ಪ್ರತಿ ಮಂಗಳವಾರದಂದು ಸಂತೆ ನಡೆಯುವ ಮಿಳಘಟ್ಟ ರಸ್ತೆಯ ಇಕ್ಕೆಲಗಳಲ್ಲಿ ವ್ಯಾಪಾರಿಗಳು ಅಂಗಡಿ - ಮುಂಗಟ್ಟು ಹಾಕಿಕೊಳ್ಳುತ್ತಾರೆ. ಇದರಿಂದ ಸುಗಮ ವಾಹನ ಸಂಚಾರದ ಮೇಲೆ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ರಸ್ತೆಯ ಬದಿಯಲ್ಲಿ ಮಾತ್ರ ಅಂಗಡಿ - ಮುಂಗಟ್ಟು ಹಾಕಲು ಅವಕಾಶ ನೀಡಿ, ಮತ್ತೊಂದು ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಇದೇ ಸಂದರ್ಭದಲ್ಲಿ ಪಿ.ರುದ್ರೇಶ್ ಸಲಹೆ ನೀಡಿದ್ದಾರೆ.
ಪ್ರವಾಸಿ ಮೋಟಾರು ವಾಹನ ಹಾಗೂ ಚಾಲಕರ ಸಂಘದ ಅಧ್ಯಕ್ಷ ಮಹಮ್ಮದ್ ಆರೀಫ್‍ರವರು ಮಾತನಾಡಿ, ನಗರದ ಓ.ಟಿ. ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಿದ್ದು ವಾಹನಗಳ ನಿಲುಗಡೆ ಮಾಡುವುದೆ ಸಮಸ್ಯೆಯಾಗಿದೆ. ರಸ್ತೆಗೆ ಹೊಂದಿಕೊಂಡಂತೆ ಪಲ್ಲವಿ ಹೋಟೆಲ್ ಬಳಿಯಿರುವ ಕನ್ಸರ್‍ವೆನ್ಸಿ ಅಭಿವೃದ್ದಿಗೊಳಿಸಿ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.
ಹೋರಾಟಗಾರ ಅಶೋಕ್ ಯಾದವ್‍ರವರು ಮಾತನಾಡಿ, ನಗರದ ಡಿವೈಡರ್‍ಗಳ ಮಧ್ಯದಲ್ಲಿ ಅವೈಜ್ಞಾನಿಕವಾಗಿ ಫ್ಲೆಕ್ಸ್ ಅಳವಡಿಕೆ ಮಾಡುತ್ತಿರುವುದರಿಂದ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಅಪಘಾತಗಳು ಸಂಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಡಿವೈಡರ್‍ಗಳ ಮಧ್ಯೆ ಫ್ಲೆಕ್ಸ್ ಅಳವಡಿಕೆ ಮಾಡದಂತೆ ಆದೇಶ ಹೊರಡಿಸಬೇಕು ಎಂದು ಸಲಹೆ ನೀಡಿದರು.







