ಕೆಎಫ್‍ಡಿ ಮತ್ತು ಪಿಎಫ್‍ಐಯನ್ನು ಕೇಂದ್ರ ಸರಕಾರ ನಿಷೇಧಿಸಲಿ : ಎಸ್‍ಡಿಪಿಐ ಸವಾಲು

ಮಡಿಕೇರಿ,ಸೆ.4 : ಕೆಎಫ್‍ಡಿ ಮತ್ತು ಪಿಎಫ್‍ಐ ಸಂಘಟನೆಗಳನ್ನು ನಿಷೇಧಿಸುವಂತೆ ಒತ್ತಾಯಿಸುತ್ತಿರುವ ಬಿಜೆಪಿ ಮಂದಿ ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವ ತಮ್ಮದೇ ಸರ್ಕಾರದ ಮೂಲಕ ಸಂಘಟನೆಗಳನ್ನು ನಿಷೇಧಿಸಲಿ ಎಂದು ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಅಶ್ರಫ್ ಇಂಡಿಯಾದ ಜಿಲ್ಲಾಧ್ಯಕ್ಷರಾದ ಅಮಿನ್ ಮೊಹಿಸಿನ್ ಸವಾಲು ಹಾಕಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಎಫ್‍ಐ ಮತ್ತು ಕೆಎಫ್‍ಡಿ ಸಂಘಟನೆಗಳನ್ನು ನಿಷೇಧಿಸುವಂತೆ ಒತ್ತಾಯಿಸಿ ಬಿಜೆಪಿ ನಡೆಸುತ್ತಿರುವ ಬೈಕ್ ರ್ಯಾಲಿಗೆ ಯಾವುದೇ ಕಾರಣಕ್ಕು ಅವಕಾಶ ನೀಡಬಾರದು ಎಂದರು. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಇರುವುದರಿಂದ ಈ ಎರಡು ಸಂಘಟನೆಗಳನ್ನು ನಿಷೇಧಿಸಬಹುದಲ್ಲ ಎಂದು ಪ್ರಶ್ನಿಸಿದರು. ಸಂಘಟನೆಗಳನ್ನು ನಿಷೇಧಿಸಿದರೆ ಕಾನೂನು ಹೋರಾಟ ನಡೆಸಲು ಸಿದ್ಧವಿರುವುದಾಗಿ ಹೇಳಿದರು.
ಸಚಿವ ರಮಾನಾಥ ರೈ ಅವರ ವಿರುದ್ಧ ಸಿಬಿಐ ತನಿಖೆಯಾಗಬೇಕು ಮತ್ತು ಪಿಎಫ್‍ಐ, ಕೆಎಫ್‍ಡಿ ಸಂಘಟನೆಗಳನ್ನು ನಿಷೇಧಿಸಬೇಕೆಂದು ಒತ್ತಾಯಿಸಿ ನಡೆಸಲಾಗುತ್ತಿರುವ ಬೈಕ್ ರ್ಯಾಲಿಯಿಂದ ಜನ ಸಾಮಾನ್ಯರಿಗೆ ತೊಂದರೆಯಾಗಲಿದೆ. ಈಗಷ್ಟೆ ಶಾಂತಿಯನ್ನು ಕಂಡುಕೊಳ್ಳುತ್ತಿರುವ ಮಂಗಳೂರು ವ್ಯಾಪ್ತಿಯಲ್ಲಿ ಮತ್ತೆ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಗಳಿದೆ. ಬಿಜೆಪಿ ತನ್ನ ಬೇಡಿಕೆಗಾಗಿ ವಿಧಾನಸಭೆಯಲ್ಲಿ ಹೋರಾಟ ನಡೆಸಲಿ ಎಂದು ಅಮಿನ್ ಮೊಹಿಸಿನ್ ಒತ್ತಾಯಿಸಿದರು.
ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಶೌಕತ್ ಆಲಿ ಮಾತನಾಡಿ, ಪ್ರಚೋದನಕಾರಿ ಭಾಷಣ ಮಾಡಿರುವ ಕಂಠಿ ಕಾರ್ಯಪ್ಪ ಅವರ ಗ್ರಾಮ ಪಂಚಾಯತ್ ಸದಸ್ಯ ಸ್ಥಾನವನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಬಷೀರ್ ಹಾಗೂ ನಗರದಸಭಾ ಸದಸ್ಯರಾದ ಮನ್ಸೂರು ಉಪಸ್ಥಿತರಿದ್ದರು.







