ವದಂತಿ ಆಧಾರದಲ್ಲಿ ಸುದ್ದಿ ಪ್ರಸಾರ ಬೇಡ: ನಿತೀಶ್

ಪಾಟ್ನ, ಸೆ.4: ವದಂತಿಯ ಆಧಾರದಲ್ಲಿ ಸುದ್ದಿಯನ್ನು ಪ್ರಸಾರ ಮಾಡಬೇಡಿ. ಜೆಡಿಯುಗೆ ಸಂಬಂಧಿಸಿದ ಸುದ್ದಿಯನ್ನು ಪ್ರಸಾರ ಮಾಡುವ ಮೊದಲು ತನ್ನನ್ನು ಸಂಪರ್ಕಿಸಿ ಎಂದು ಜೆಡಿಯು ಮುಖಂಡ, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸುದ್ದಿಮಾಧ್ಯಮದವರಿಗೆ ಸಲಹೆ ನೀಡಿದ್ದಾರೆ.
ಕೇಂದ್ರ ಸಚಿವ ಸಂಪುಟದ ಪುನಾರಚನೆಯ ಸಂದರ್ಭ ಜೆಡಿಯುವನ್ನು ನಿರ್ಲಕ್ಷಿಸಲಾಗಿದೆ ಎಂಬ ಮಾಧ್ಯಮದ ವರದಿಯ ಬಗ್ಗೆ ಅವರು ಪ್ರತಿಕ್ರಿಯೆ ನೀಡುತ್ತಿದ್ದರು. ವದಂತಿಯನ್ನು ನಂಬಿಕೊಂಡು ಸುದ್ದಿ ಪ್ರಸಾರ ಮಾಡುವ ಮೂಲಕ ಲಾಲೂಪ್ರಸಾದ್ ಯಾದವ್‌ಗೆ ಟೀಕಾಪ್ರವಾಹ ಮುಂದುವರಿಸಲು ನೀವೇ ಅವಕಾಶ ಒದಗಿಸುತ್ತೀರಿ. ಈ ಮೂಲಕ ಲಾಲೂಪ್ರಸಾದ್ ಸುದ್ದಿಮಾಧ್ಯಮಗಳ ‘ಕಣ್ಮಣಿ’ ಆಗಿಬಿಟ್ಟಿದ್ದಾರೆ. ಇತರ ಎಲ್ಲಾ ರಾಜಕೀಯ ಮುಖಂಡರಿಗಿಂತ ಲಾಲೂಗೆ ಮಾಧ್ಯಮಗಳಲ್ಲಿ ಹೆಚ್ಚಿನ ಅವಕಾಶ ದೊರೆಯುತ್ತಿದೆ ಎಂದು ನಿತೀಶ್ ದೂರಿದರು.
ಜೆಡಿಯು ಪಕ್ಷಕ್ಕೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನಮಾನ ದೊರೆಯಲಿದೆ. ಇಷ್ಟು ಮಂದಿ ಸಚಿವರಾಗಲಿದ್ದಾರೆ. ಇವರಿಗೆ ಕ್ಯಾಬಿನೆಟ್ ದರ್ಜೆ ದೊರೆಯಲಿದೆ.. ಇತ್ಯಾದಿ ಊಹಾಪೋಹದ ಸುದ್ದಿ ಸೃಷ್ಟಿಸಿ ಗಂಟೆಗಟ್ಟಲೆ ಚರ್ಚೆ ನಡೆಸಲಾಗಿದೆ. ಇದು ಸುಳ್ಳೆಂದು ಸಚಿವ ಸಂಪುಟ ಪುನರಚನೆಯ ಸಂದರ್ಭ ಸಾಬೀತಾಯಿತು. ಆಗ ತಮ್ಮ ತಪ್ಪನ್ನು ಮರೆಮಾಚಿಕೊಳ್ಳಲು -ಜೆಡಿಯು ಪಕ್ಷವನ್ನು ಕೇಂದ್ರ ಸರಕಾರ ನಿರ್ಲಕ್ಷಿಸಿದೆ ಎಂಬ ವರದಿಯನ್ನು , ಇದು ಕೂಡಾ ಊಹಿಸಿದ ವರದಿ, ತೇಲಿಬಿಡಲಾಗಿದೆ ಎಂದು ನಿತೀಶ್ ಟೀಕಿಸಿದರು.
ಜೆಡಿಯು ಕೇಂದ್ರ ಸಂಪುಟಕ್ಕೆ ಸೇರುವ ಪ್ರಸ್ತಾವನೆಯೇ ಇರಲಿಲ್ಲ ಎಂದ ಮೇಲೆ ನಿರ್ಲಕ್ಷಿಸುವ ಪ್ರಶ್ನೆಯೇ ಇರುವುದಿಲ್ಲ ಎಂದು ನಿತೀಶ್ ಸ್ಪಷ್ಟಪಡಿಸಿದರು. ಕೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆಗೊಳ್ಳಲು ಸರಕಾರದಿಂದ ನಮಗೆ ಇದುವರೆಗೂ ಯಾವುದೇ ಆಹ್ವಾನ ಬಂದಿಲ್ಲ . ಕೇಂದ್ರ ಸಚಿವ ಸಂಪುಟಕ್ಕೆ ಜೆಡಿಯು ಸೇರ್ಪಡೆಗೊಳ್ಳಲಿದೆ ಎಂದು ಮಾಧ್ಯಮದ ವರದಿಯ ಮೂಲಕ ನಮಗೆ ತಿಳಿಯಿತು ಎಂದು ಕಳೆದ ವಾರ ನಿತೀಶ್ ಹೇಳಿಕೆ ನೀಡಿದ್ದರು.







