ಮಲೆನಾಡಿನಲ್ಲಿ ಕೇರಳಿಗರ ಸಂಭ್ರಮದ ಓಣಂ ಹಬ್ಬ ಆಚರಣೆ

ಬಣಕಲ್, ಸೆ.4: ಮಲೆನಾಡಿನ ಬಣಕಲ್ ಸುತ್ತಮುತ್ತ ವಾಸವಾಗಿರುವ ಕೇರಳ ಮೂಲದ ಮಲೆಯಾಳಂ ಸಮುದಾಯದವರು ಬೆಳಿಗ್ಗೆಯೇ ಬೇಗನೇ ಎದ್ದು ಮಿಂದು ಮಡಿಯಾಗಿ ದೇವಸ್ಥಾನಗಳಿಗೆ ತೆರಳಿ ಪೂಜೆ ನೆರವೇರಿಸಿದರು.
ಕೇರಳವನ್ನು ಆಳಿದ್ದ ಪ್ರಖ್ಯಾತ ಮಹಾರಾಜ ಬಲಿ ಚಕ್ರವರ್ತಿ ತಾನು ಆಳಿದ್ದ ರಾಜ್ಯಕ್ಕೆ ಪಾತಾಳ ಲೋಕದಿಂದ ಬಂದು ಸಂಪತ್ತು ಮತ್ತು ಸಂವೃಧ್ದಿಯನ್ನು ಗಮನಿಸಲು ಆಗಮಿಸುತ್ತಾರೆಂಬ ನಂಬಿಕೆಯಿಂದ ಮಲೆಯಾಳಂ ಸಮುದಾಯದವರು ಬಲಿ ಚಕ್ರವರ್ತಿಯ ಆಗಮನಕ್ಕೆ ಮನೆಯಲ್ಲಿ ಮಹಿಳೆಯರು ಶ್ವೇತ ವರ್ಣದ ಸೀರೆ ವಸ್ತುಗಳನ್ನು ತೊಟ್ಟು ಹಾಗೂ ಚಿನ್ನಾಭರಣ ಧರಿಸಿ ತಾಜಾ ಹೂವುಗಳಿಂದ ಆಕರ್ಷಕ ರಂಗೋಲಿ(ಪೂಕಳಂ)ಬಿಡಿಸುತ್ತಾರೆ.
ಪುರುಷರೂ ಕೂಡ ಶ್ವೇತವರ್ಣದ ವಸ್ತ್ರಗಳನ್ನು ಧರಿಸಿ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸುತ್ತಾರೆ. ಪೂಜೆಯ ಬಳಿಕ ಮನೆಯಲ್ಲಿ ವಿವಿಧ ಖಾದ್ಯ ತಿಂಡಿಗಳನ್ನು ತಯಾರಿಸಿ ಹಬ್ಬ ಮಾಡುತ್ತಾರೆ. ವಿಶೇಷವಾಗಿ ಹೆಣ್ಣು ಮಕ್ಕಳು ಈ ಹಬ್ಬದಲ್ಲಿ ಪೂಕಳಂ ಬಿಡಿಸಿ ಹೊಸ ಬಟ್ಟೆ ತೊಟ್ಟು ಸಂಭ್ರಮಿಸುತ್ತಾರೆ. ನೃತ್ಯವೂ ಈ ಹಬ್ಬದಲ್ಲಿ ಮಾಡುವ ಸಂಪ್ರದಾಯವಿದೆ.
ಬಣಕಲ್, ಕೊಟ್ಟಿಗೆಹಾರ, ಕುವೆಂಪು ನಗರ, ಮತ್ತಿಕಟ್ಟೆ, ಬಂಕೇನಹಳ್ಳಿ ಸುತ್ತಮುತ್ತ ಕೇರಳ ಮೂಲದ ಮಲೆಯಾಳಂ ಸಮುದಾಯದವರು ಮನೆಯಲ್ಲಿ ರಂಗೋಲಿ ಬಿಡಿಸಿ ಓಣಂ ಹಬ್ಬದ ಸಂಭ್ರಮ ಆಚರಿಸಿದ್ದಾರೆ.







