ಮಂಡ್ಯ : ಎ-ಎಫ್‍ಎಂಎಸ್ ಮೂಲಕ ವೇತನಕ್ಕೆ ಒತ್ತಾಯ

ಮಂಡ್ಯ, ಸೆ.4: ಇ-ಎಫ್‍ಎಂಎಸ್ ಮೂಲಕ ಸಂಬಳ ಪಾವತಿ ಒಳಗೊಂಡಂತೆ ಇತರೆ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗ್ರಾಪ ಪಂಚಾಯತ್ ನೌಕರರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಸಿಲ್ವರ್ ಜ್ಯೂಬಿಲಿ ಪಾರ್ಕ್‍ನಿಂದ ಹೆದ್ದಾರಿ ಮೂಲಕ ಮೆರವಣಿಗೆ ಹೊರಟು ಜಿಲ್ಲಾ ಪಂಚಾಯತ್ ಕಚೇರಿ ಎದುರು ಧರಣಿ ನಡೆಸಿದ ಅವರು, ಬೇಡಿಕೆಗಳ ಮನವಿ ಸಲ್ಲಿಸಿದರು.
ಇ-ಎಫ್‍ಎಂಎಸ್ ಮೂಲಕ ಸಂಬಳ ಪಾವತಿಸುವಂತೆ ಆರ್‍ಡಿಪಿಆರ್ ಪ್ರಧಾನ ಕಾರ್ಯದರ್ಶಿ ಕಳೆದ ತಿಂಗಳ 17 ರಂದು ಸುತ್ತೋಲೆ ಹೊರಡಿಸಿದ್ದು, ಕೇವಲ ಅನುಮೋದಿತ ಸಿಬ್ಬಂದಿಗೆ ಮಾತ್ರ ಇ-ಎಫ್‍ಎಂಎಸ್ ಮೂಲಕ ಸಂಬಳ ಪಾವತಿಸಿ, ಇತರ ಸಿಬ್ಬಂದಿಗೆ ಅನ್ವಯಿಸಿಲ್ಲ ಎಂದು ಅವರು ಕಿಡಿಕಾರಿದರು.
ರಾಜ್ಯದಲ್ಲಿ ಇನ್ನೂ 25 ಸಾವಿರ ನೌಕರರು ಅನುಮೋದನೆಗೊಂಡಿಲ್ಲ. ಕೇವಲ ಅನುಮೋದಿತ ಸಿಬ್ಬಂದಿಗೆ ಮಾತ್ರ ಇ-ಎಫ್‍ಎಂಎಸ್ ಮೂಲಕ ಸಂಬಳ ಪಾವತಿಸುತ್ತಿರುವುದು ನೌಕರರ ಸಂಘಟನೆಯನ್ನು ಒಡೆದಾಳುವ ಕುತಂತ್ರವಾಗಿದೆ ಎಂದು ಅವರು ಆರೋಪಿಸಿದರು.
ಗ್ರಾಮ ಪಂಚಾಯತ್ ನೌಕರರು ಕನಿಷ್ಠ ಕೂಲಿ ವ್ಯಾಪ್ತಿಯಲ್ಲಿ ಬರುತ್ತಿದ್ದು, ಎಲ್ಲ ನೌಕರರು ಕನಿಷ್ಠ ಕೂಲಿ ಪಡೆಯಲು ಅರ್ಹರಾಗಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿಗಳ ಜತೆ ನಡೆಸಿದ ಸಭೆಯಲ್ಲಿ ಎಲ್ಲ ನೌಕರರಿಗೂ ಸಂಬಳ ಕೊಡುವುದಾಗಿ ಅಭಿಪ್ರಾಯಕ್ಕೆ ಬರಲಾಗಿತ್ತು ಎಂದು ನೌಕರರು ಪ್ರತಿಪಾದಿಸಿದರು.
ಎಲ್ಲ ನೌಕರರಿಗೂ ಕನಿಷ್ಠ ಕೂಲಿ ಸರಕಾರದಿಂದಲೇ ನೇರವಾಗಿ ಪಾವತಿಯಾಗಬೇಕು. ಬಿಲ್ ಕಲೆಕ್ಟರ್‍ಗಳ ಭಡ್ತಿಗೆ ಪಿಯುಸಿ ಶೈಕ್ಷಣಿಕ ಅರ್ಹತೆಯನ್ನು ಪರಿಗಣಿಸುವ ಸುತ್ತೋಲೆ ಹಿಂಡಪೆದು, ಎಸೆಸೆಲ್ಸಿಯನ್ನು ಪರಿಗಣಿಸಬೇಕು ಎಂದು ಅವರು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘದ ಜಿಲ್ಲಾಧ್ಯಕ್ಷ ಜಿ.ರಾಮಕೃಷ್ಣ, ಕಾರ್ಯದರ್ಶಿ ಜಿ.ಆರ್.ರಾಮು, ಸಿಐಟಿಯು ಸಿ.ಕುಮಾರಿ, ಮೋದನೂರು ನಾಗರಾಜು, ಎಂ.ಎಂ.ಶಿವಕುಮಾರ, ಬಸವರಾಜು, ಪುಟ್ಟಸ್ವಾಮಿ, ರಮೇಶ, ಶಿವರಾಮು, ಆನಂದ್, ಭೈರೇಶ್‍ಗೌಡ, ಮಾದೇಶ, ಪವಿತ್ರ, ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.







