‘ಜನಪ್ರತಿನಿಧಿಗಳು, ನೌಕರರ ಮಕ್ಕಳನ್ನು ಕಡ್ಡಾಯವಾಗಿ ಸರಕಾರಿ ಶಾಲೆಗೆ ಸೇರಿಸಲು ತಕ್ಷಣವೇ ಸುಗ್ರೀವಾಜ್ಞೆ ಹೊರಡಿಸಿ’
ಸರಕಾರಿ ಶಾಲೆಗಳ ಸಬಲೀಕರಣ ಸಮಿತಿ ಶಿಫಾರಸ್ಸು

ಬೆಂಗಳೂರು, ಸೆ. 4: ಸರಕಾರಿ ಹಾಗೂ ಸರಕಾರಿ ಅನುದಾನಿತ ಶಾಲೆಗಳನ್ನು ನೆರೆಹೊರೆಯ ಸಮಾನ ಶಾಲೆಗಳನ್ನಾಗಿ ಪರಿವರ್ತಿಸಲು ಆ ವ್ಯಾಪ್ತಿಯ ಎಲ್ಲ ಜನಪ್ರತಿನಿಧಿಗಳು ಮತ್ತು ಸರಕಾರಿ ನೌಕರರು ಕಡ್ಡಾಯವಾಗಿ ತಮ್ಮ ಮಕ್ಕಳನ್ನು ಸರಕಾರಿ ಹಾಗೂ ಸರಕಾರಿ ಅನುದಾನ ಶಾಲೆಗಳಿಗೆ ಸೇರಿಸುವಂತೆ ಕೂಡಲೇ ಸುಗ್ರೀವಾಜ್ಞೆ ಹೊರಡಿಸಬೇಕೆಂದು ಸರಕಾರಿ ಶಾಲೆಗಳ ಸಬಲೀಕರಣ ಸಮಿತಿ ಶಿಫಾರಸ್ಸು ಮಾಡಿದೆ.
ಸೋಮವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ನೇತೃತ್ವದ ಸಮಿತಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸರಕಾರಿ ಶಾಲೆಗಳ ಸಬಲೀಕರಣ ದೃಷ್ಟಿಯಿಂದ 21 ಮಹತ್ವದ ಶಿಫಾರಸ್ಸುಗಳ ಸಮಗ್ರ ವರದಿಯನ್ನು ಸಲ್ಲಿಸಿತು.
ಸರಕಾರಿ ಕಿರಿಯ-ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ತಕ್ಷಣವೇ ಪ್ರಾರಂಭಿಸಬೇಕು. ಸರಕಾರಿ ಶಾಲೆಗಳನ್ನು ಮುಚ್ಚುವ ಹಾಗೂ ವಿಲೀನ ಮಾಡುವ ಪ್ರಕ್ರಿಯೆಯನ್ನು ತಕ್ಷಣ ನಿಲ್ಲಿಸಿ ಮುಚ್ಚಿರುವ ಎಲ್ಲ ಸರಕಾರಿ ಶಾಲೆಗಳನ್ನು ಪುನಃ ತೆರೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ಶಿಕ್ಷಣದಲ್ಲಿ ಮಾಹಿತಿ ಸಂವಹನ ತಂತ್ರಜ್ಞಾನ(ಐಸಿಟಿ) ಭಾಗವಾಗಿ ಸರಕಾರಿ ಶಾಲೆಗಳಲ್ಲಿ ಹೊಸ ತಂತ್ರಜ್ಞಾನಗಳನ್ನು, ಇ-ಲೈಬ್ರರಿ, ಇ-ಬುಕ್ ಇತ್ಯಾದಿ ಕಾಲೋಚಿತ ತಂತ್ರಜ್ಞಾನವನ್ನು ಅಳವಡಿಕೆ ಮತ್ತು ತಾಂತ್ರಿಕ ವಿಧಾನಗಳನ್ನು ಕನ್ನಡ ಭಾಷೆಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕೋರಲಾಗಿದೆ.
ಇಂಗ್ಲಿಷ್ ಕಲಿಕೆ: ಇಂಗ್ಲಿಷ್ ತರಬೇತಿ ಪಡೆದ ಶಿಕ್ಷಕರಿಂದ ಸರಕಾರಿ ಶಾಲೆಗಳಲ್ಲಿ ಒಂದನೆ ತರಗತಿಯಿಂದಲೇ ಇಂಗ್ಲಿಷ್ ಒಂದು ಭಾಷೆಯಾಗಿ ಪರಿಣಾಮಕಾರಿಯಾಗಿ ಕಲಿಸಬೇಕು. ಸರಕಾರಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು.
ಸರಕಾರಿ ಶಾಲೆಗಳಲ್ಲಿ ಶಿಕ್ಷಕರನ್ನು ಪ್ರಧಾನವಾಗಿ ಕಲಿಕೆಯಲ್ಲಿ ಮಾತ್ರ ತೊಡಗಿಸಿಕೊಂಡು ಎಲ್ಲ ರೀತಿಯ ಕಲಿಕೇತರ ಕೆಲಸಗಳಿಂದ ಅವರನ್ನು ಮುಕ್ತಗೊಳಿಸಬೇಕು. ಸರಕಾರಿ ಶಾಲೆಗಳ ಗುಣಮಟ್ಟ ಸುಧಾರಿಸಲು ಪ್ರತಿ ಶಾಲೆಗೂ ಕನಿಷ್ಠ ತರಗತಿಗೊಬ್ಬ ಶಿಕ್ಷಕ ವಿಷಯಕ್ಕೊಬ್ಬ ಶಿಕ್ಷಕರ ನೇಮಕಾತಿ ಅಗತ್ಯವಿದೆ. ಮಕ್ಕಳ ಶಿಕ್ಷಕರ ಆದರ್ಶ, ಅನುಪಾತ ಮುಟ್ಟುವವರೆಗೆ ಕನಿಷ್ಠ ವಿಷಯವಾರು ಬೋಧನೆಯ ಪ್ರಮಾಣದ ಅನುಪಾತವನ್ನೂ ಗಮನಿಸಿ ಶಿಕ್ಷಕರನ್ನು ಒದಗಿಸಬೇಕು.
ಸರಕಾರಿ ಶಾಲೆಗಳ ಸಬಲೀಕರಣ: ಆರ್‌ಟಿಇ ಅಡಿಯಲ್ಲಿ ಶೇ.25ರಷ್ಟು ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸಿ, ಅವರ ಶುಲ್ಕವನ್ನು ಸರಕಾರ ಭರಿಸುವುದನ್ನು ನಿಲ್ಲಿಸಬೇಕು. ಈ ಹಣವನ್ನು ಸರಕಾರಿ ಶಾಲೆಗಳ ಸಬಲೀಕರಣಕ್ಕೆ ಬಳಸಬೇಕು. ಆರ್‌ಟಿಇ ಅಡಿಯಲ್ಲಿ ಖಾಸಗಿ ಶಾಲೆಗಳಿಗೆ ಪ್ರವೇಶ ಪಡೆದ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದು ಆಯಾ ಖಾಸಗಿ ಶಾಲೆಗಳ ಸಾಮಾಜಿಕ ಜವಾಬ್ದಾರಿಯಾಗಬೇಕು.
ಭಾಷಾ ಕಲಿಕಾ ಅಧಿನಿಯಮ-2015ನ್ನು ಕಡ್ಡಾಯವಾಗಿ ಜಾರಿಗೊಳಿಸುವುದು, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸರಕಾರದ ಕನ್ನಡ ಕಲಿಕೆ ಕಾಯಿದೆ ಮತ್ತು ನಿಯಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ಬಗ್ಗೆ ಮೇಲುಸ್ತುವಾರಿ ನಡೆಸಲು ಒಂದು ಉನ್ನತ ಮೇಲುಸ್ತುವಾರಿ ಸಮಿತಿ ರಚಿಸಬೇಕು.
ಅಂಗನವಾಡಿ ಕೇಂದ್ರಗಳನ್ನು ಮಕ್ಕಳ ಪಾಲನಾ ಕೇಂದ್ರವನ್ನಾಗಿಸಲು ಬೇಕಾದ ಮೂಲ ಸೌಕರ್ಯಗಳನ್ನು ವ್ಯವಸ್ಥಿತ ರೀತಿಯಲ್ಲಿ ಒದಗಿಸಬೇಕು. ಸಮ ಸಮಾಜಕ್ಕಾಗಿ ಗ್ರಾಮೀಣ ಪ್ರದೇಶದಲ್ಲಿ ಪಂಚಾಯಿತಿ ಹಾಗೂ ಪಟ್ಟಣ, ನಗರ ಪ್ರದೇಶಗಳಲ್ಲಿ ವಾರ್ಡ್ ಮಟ್ಟದ ಸುಸಜ್ಜಿತ ನೆರೆಹೊರೆಯ ಸಮಾನ ಸಾರ್ವಜನಿಕ ಶಾಲೆಗಳನ್ನು ಕೇಂದ್ರೀಯ ಶಾಲೆಯ ಮಾದರಿಯಲ್ಲಿ ಸ್ಥಾಪಿಸಬೇಕೆಂದು ಶಿಫಾರಸ್ಸು ಮಾಡಲಾಗಿದೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್, ಸಾರಿಗೆ ಸಚಿವ ಎಚ್.ಎಂ.ರೇವಣ್ಣ, ಸರಕಾರದ ಮುಖ್ಯ ಕಾರ್ಯದರ್ಶಿ ಸುಭಾಶ್ ಚಂದ್ರ ಕುಂಟಿಯಾ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಹಿರಿಯ ಸಾಹಿತಿಗಳಾದ ಪ್ರೊ.ಚಂಪಾ, ಗೊ.ರು.ಚ, ಡಾ.ಸಿದ್ದಲಿಂಗಯ್ಯ, ಡಾ.ಎಲ್. ಹನುಮಂತಯ್ಯ, ಶಿಕ್ಷಣ ತಜ್ಞ ಪ್ರೊ.ನಿರಂಜನಾರಾಧ್ಯ, ಮುಖ್ಯಮಂತ್ರಿ ಚಂದ್ರು, ರಾ.ನ.ಚಂದ್ರಶೇಖರ್ ಸೇರಿದಂತೆ ಇನ್ನಿತರರು ಹಾಜರಿದ್ದರು.
‘ಸರಕಾರಿ ಶಾಲೆಗಳ ಸಬಲೀಕರಣ ದೃಷ್ಟಿಯಿಂದ ಸಮಿತಿ ನೀಡಿರುವ ಎಲ್ಲ ಶಿಫಾರಸ್ಸುಗಳನ್ನು ಗಂಭೀರವಾಗಿ ಪರಿಶೀಲಿಸಿ, ಸಚಿವ ಸಂಪುಟದಲ್ಲಿ ಚರ್ಚೆಸಿ, ಎಲ್ಲ ಶಿಫಾರಸ್ಸುಗಳ ಅನುಷ್ಠಾನಕ್ಕೆ ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸರಕಾರಿ ಶಾಲೆಗಳಲ್ಲಿ ಕೆಳ ಜಾತಿ, ಕೆಳ ವರ್ಗದ ಬಡ ವಿದ್ಯಾರ್ಥಿಗಳು ಕಲಿಯುತ್ತಿದ್ದು, ಅವರೆಲ್ಲರಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು.
ಶೋಷಿತರ ಸಮುದಾಯಗಳಿಗೆ ಗುಣಮಟ್ಟದ ಶಿಕ್ಷಣ ಸಿಕ್ಕರೆ ಮಾತ್ರ ಸಾಮಾಜಿಕ, ಆರ್ಥಿಕ ಅಸಮಾನತೆ ನಿವಾರಣೆಯಾಗುತ್ತದೆ. ಅಲ್ಲದೆ, ಸಮಾನ ಶಿಕ್ಷಣ ಜಾರಿಗೆ ತರಬೇಕು. ಇದರ ನ್ಯೂನತೆಗಳನ್ನು ಬಳಸಿಕೊಂಡ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿನ ಅನುಕೂಲವಾಗಿದೆ.
ರಾಜ್ಯ ಸರಕಾರ ಪ್ರಾಥಮಿಕ ಶಿಕ್ಷಣಕ್ಕೆ 18 ಸಾವಿರ ಕೋಟಿ ರೂ. ಅನುದಾನ ಒದಗಿಸಿದೆ. ಆದರೂ ಸರಕಾರಿ ಶಾಲೆಗಳಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಖಾಸಗಿ ಶಾಲೆಯಲ್ಲಿ ಗುಣಮಟ್ಟ ಇರುವಂತೆ ಸರಕಾರಿ ಶಾಲೆಗಳಲ್ಲಿ ಆಗಬೇಕಾಗಿದೆ. ಖಾಸಗಿ ಶಾಲೆಗಳ ಮೇಲೆ ವ್ಯಾಮೋಹ ಹೆಚ್ಚಾಗಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ.
ಮಾತೃಭಾಷೆ ಉಳಿಸಬೇಕು. ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಈ ವಿಷಯದ ಕುರಿತು ಪ್ರಧಾನಿಗೆ ಪತ್ರ ಬರೆಯಲಾಗಿತ್ತು. ಅವರಿಂದ ಸರಿಯಾದ ಸ್ಪಂದನೆ ಸಿಗದೆ, ಸಭೆಯನ್ನು ನಡೆಸಿಲ್ಲ. ಸರಕಾರಿ ಶಾಲೆಗಳನ್ನು ಸಶಕ್ತ ಮಾಡುವ ನಿಟ್ಟಿನಲ್ಲಿ ಸರಕಾರ ಅಗತ್ಯ ಕ್ರಮ ವಹಿಸಲಿದೆ’
-ಸಿದ್ದರಾಮಯ್ಯ ಮುಖ್ಯಮಂತ್ರಿ
ಖಾಸಗಿ ಉದ್ದಿಮೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವ ಸಂಬಂಧ ಡಾ. ಸರೋಜಿನಿ ಮಹಿಷಿ ವರದಿ ಅನುಷ್ಠಾನಕ್ಕೆ ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಂಡಿದ್ದು, ಸಾಧ್ಯವಿರುವ ಎಲ್ಲ ಶಿಫಾರಸ್ಸುಗಳನ್ನು ಜಾರಿಗೊಳಿಸಲು ಸರಕಾರ ಬದ್ಧ’
-ಸಿದ್ದರಾಮಯ್ಯ ಮುಖ್ಯಮಂತ್ರಿ
‘ಸಮಾನತೆ, ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ಸರಕಾರಿ ಶಾಲೆಗಳ ಸಬಲೀಕರಣ, ಎಲ್ಲ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯದಿದ್ದರೆ, ಇನ್ಯಾರಿಂದಲೂ ಅದು ಸಾಧ್ಯವಾಗುವುದಿಲ್ಲ. ಆ ನಿಟ್ಟಿನಲ್ಲಿ ರಾಜ್ಯ ಸರಕಾರ ಬದ್ಧತೆಯಿಂದ ಕಾರ್ಯಪ್ರವೃತ್ತ ಆಗಬೇಕು’
-ಪ್ರೊ.ವಿ.ಪಿ.ನಿರಂಜನಾರಾಧ್ಯ ಶಿಕ್ಷಣ ತಜ್ಞ







