ಮಹಿಳೆಗೆ ಗೃಹ ಹಿಂಸೆ: 3 ಭಾರತೀಯರ ಬಂಧನ

ವಾಶಿಂಗ್ಟನ್, ಸೆ. 3: ಹೆಂಡತಿಯನ್ನು ಹೊಡೆದ ಹಾಗೂ ಹಿಂಸೆ ನೀಡಿದ ಆರೋಪದಲ್ಲಿ ಓರ್ವ ಪಂಜಾಬ್ ನಿವಾಸಿ ಮತ್ತು ಆತನ ಹೆತ್ತವರನ್ನು ಅಮೆರಿಕದ ಫ್ಲೋರಿಡ ರಾಜ್ಯದ ಹಿಲ್ಸ್‌ಬಾರೊ ಕೌಂಟಿಯಲ್ಲಿ ಶನಿವಾರ ಬಂಧಿಸಲಾಗಿದೆ ಎಂದು ‘ಟ್ಯಾಂಪ ಬೇ ಟೈಮ್ಸ್’ ವರದಿ ಮಾಡಿದೆ.
ಈ ಆಘಾತಕಾರಿ ಗೃಹ ಹಿಂಸೆ ಪ್ರಕರಣಕ್ಕೆ ಸಂಬಂಧಿಸಿ 33 ವರ್ಷದ ದೇವ್‌ಬೀರ್ ಕಾಲ್ಸಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆತ ತನ್ನ ಹೆಂಡತಿ ಸಿಲ್ಕಿ ಗೈಂಡ್‌ರಿಗೆ ಪ್ರತಿ ನಿತ್ಯ ಹೊಡೆಯುತ್ತಿದ್ದ ಎಂದು ಹಿಲ್ಸ್‌ಬಾರೊ ಕೌಂಟಿ ಶರೀಫ್‌ರ ಕಚೇರಿ ತಿಳಿಸಿದೆ.
ಆಕೆಗೆ ಹೊಡೆಯುವ ಉದ್ದೇಶಕ್ಕಾಗಿಯೇ ದೇವ್‌ಬೀರ್‌ನ ಹೆತ್ತವರು ಭಾರತದಿಂದ ಅಮೆರಿಕಕ್ಕೆ ಹೋಗಿದ್ದರು.
ಸಿಲ್ಕಿ ಗೈಂಡ್ ತನಗೆ ವಿಧೇಯಳಾಗಿಲ್ಲ ಎಂಬುದಾಗಿ ದೇವ್‌ಬೀರ್ ತನ್ನ ಹೆತ್ತವರಿಗೆ ಹೇಳಿದ್ದನು ಎನ್ನಲಾಗಿದೆ.
ಹಾಗಾಗಿ, ತಮ್ಮ ಮಗನ ಹೆಂಡತಿಗೆ ‘ಬುದ್ಧಿಹೇಳುವುದಕ್ಕಾಗಿ ಮತ್ತು ಶಿಸ್ತು ಕಲಿಸುವುದಕ್ಕಾಗಿ’ 67 ವರ್ಷದ ಜಸ್ಬೀರ್ ಕಾಲ್ಸಿ ಮತ್ತು 61 ವರ್ಷದ ಭೂಪಿಂದರ್ ಕಾಲ್ಸಿ ಅಮೆರಿಕಕ್ಕೆ ಪ್ರಯಾಣಿಸಿದ್ದರು.
ಶುಕ್ರವಾರ ಜಗಳ ತಾರಕಕ್ಕೆ ಹೋದಾಗ, ಸಿಲ್ಕಿ ಭಾರತದಲ್ಲಿರುವ ತನ್ನ ಹೆತ್ತವರಿಗೆ ದೂರು ನೀಡಿದರು. ಅವರ ಮೂಲಕ ಪ್ರಕರಣ ಪೊಲೀಸರಿಗೆ ತಲುಪಿದೆ.







