ಉ.ಪ್ರದೇಶವನ್ನು ‘ರೋಗಿ’ಯನ್ನಾಗಿ ಮಾಡಿದ ಯೋಗಿ : ಕಾಂಗ್ರೆಸ್ ಟೀಕೆ
ಆಸ್ಪತ್ರೆಯಲ್ಲಿ ಮಕ್ಕಳ ಸಾವಿನ ಪ್ರಕರಣ

ಲಕ್ನೊ, ಸೆ.4: ಫರೂಖಾಬಾದ್‌ನ ಆರ್‌ಎಂಎಲ್ ಆಸ್ಪತ್ರೆಯಲ್ಲಿ ಆಮ್ಲಜನಕ ಪೂರೈಕೆ ಯಲ್ಲಿ ವ್ಯತ್ಯಯವುಂಟಾದ ಪರಿಣಾಮ 49 ಮಕ್ಕಳು ಸಾವನ್ನಪ್ಪಿರುವ ಘಟನೆಯ ಬಳಿಕ ಬಿಜೆಪಿಯನ್ನು ಕಾಂಗ್ರೆಸ್ ತೀವ್ರ ತರಾಟೆಗೆತ್ತಿಕೊಂಡಿದೆ.
ವೈದ್ಯಕೀಯ ನಿರ್ಲಕ್ಷ್ಯದ ಪರಿಣಾಮ ಆಸ್ಪತ್ರೆಗಳಲ್ಲಿ ಸರಣಿ ಸಾವಿನ ಪ್ರಕರಣ ಸಂಭವಿಸಿದ್ದು , ಈ ಮೂಲಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಡೀ ರಾಜ್ಯವನ್ನು ‘ರೋಗಿ’ಯನ್ನಾಗಿಸಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ. ಬಿಆರ್‌ಡಿ ಮೆಡಿಕಲ್ ಕಾಲೇಜು ದುರ್ಘಟನೆಯ ಬಳಿಕವೂ ಸರಕಾರ ಎಚ್ಚೆತ್ತಿಲ್ಲ. ಪರಿಣಾಮ ಇದೀಗ ಮತ್ತೊಂದು ದುರಂತ ಸಂಭವಿಸಿದೆ ಎಂದು ಕಾಂಗ್ರೆಸ್ ಹೇಳಿದೆ.
ಪ್ರಕರಣದ ಬಗ್ಗೆ ತಕ್ಷಣ ಗಮನ ಹರಿಸುವಂತೆ ಉ.ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರಾಜ್‌ಬಬ್ಬರ್ ಪ್ರಧಾನಿ ಮೋದಿಗೆ ಮನವಿ ಮಾಡಿಕೊಂಡಿದ್ದಾರೆ. ನೀವು ಉತ್ತರಪ್ರದೇಶ ಮೂಲದವರಾಗಿದ್ದು ಇದು ನಿಮ್ಮ ನೇರ ಹೊಣೆಗಾರಿಕೆಯಾಗಿದೆ. ಆದಿತ್ಯನಾಥ್ ಆಡಳಿತ ನಡೆಸುವಲ್ಲಿ ವಿಫಲವಾಗಿದ್ದು ಅವರನ್ನು ತಕ್ಷಣ ಬದಲಾಯಿಸಬೇಕು. ನೀವು ಈ ಕ್ರಮಕ್ಕೆ ಮುಂದಾಗದಿದ್ದರೆ, ನವಜಾತ ಶಿಶುಗಳು ‘ಮತದಾರರಲ್ಲದ ’ ಕಾರಣ ಅವುಗಳ ಬಗ್ಗೆ ನೀವು ಸಂವೇದನಾಶೀಲತೆ ಹೊಂದಿಲ್ಲ ಎಂದು ಭಾವಿಸಬೇಕಾಗುತ್ತದೆ ಎಂದು ಬಬ್ಬರ್ ಹೇಳಿದ್ದಾರೆ.
ಶಿಶುಗಳ ಸಾವಿನ ಘಟನೆ ಸರಣಿಯಂತೆ ನಡೆಯುತ್ತಿದ್ದರೂ ಮುಖ್ಯಮಂತ್ರಿ ಆದಿತ್ಯನಾಥ್ ಮಥುರಾದಲ್ಲಿ ನಡೆಯುವ ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದ ತನ್ನ ಮಿತ್ರನನ್ನು ಭೇಟಿಯಾಗಲು ವಿಮಾನದಲ್ಲಿ ತೆರಳಲೂ ಅವರಿಗೆ ಸಮಯವಿದೆ. ಆದರೆ ರಾಜ್ಯದ ಜನತೆಯ ನೋವಿಗೆ ಸಾಂತ್ವನ ಹೇಳಲು ಅವರಿಗೆ ಸಮಯವಿಲ್ಲ ಎಂದು ಬಬ್ಬರ್ ಟೀಕಿಸಿದ್ದಾರೆ.
ದೇಶದ ಭವಿಷ್ಯವಾಗಿರುವ ಮಕ್ಕಳನ್ನು ಬಿಜೆಪಿ ಹೇಗೆ ಪರಿಗಣಿಸಿದೆ ಎಂಬುದು ಇದೀಗ ತಿಳಿಯಿತು. ಬಿಜೆಪಿಗೆ ಇದೊಂದು ಕೇವಲ ಅಂಕಿಅಂಶ ಆಗಿರಬಹುದು. ಆದರೆ ತಮ್ಮ ನವಜಾತ ಶಿಶುಗಳನ್ನು ಕಳೆದುಕೊಂಡವರ ಬಳಿ ತೆರಳಿ ಅವರ ಸಂಕಟ ಏನೆಂಬುದನ್ನೂ ಒಮ್ಮೆ ಕೇಳಿ ನೋಡಿ ಎಂದು ಕಾಂಗ್ರೆಸ್ ಮುಖಂಡ ರಣ್‌ದೀಪ್‌ಸಿಂಗ್ ಸುರ್ಜೆವಾಲ ಬಿಜೆಪಿಯನ್ನು ಕುಟುಕಿದ್ದಾರೆ.
ಮೋದಿ ಯಾವಾಗ ಎಚ್ಚರಗೊಳ್ಳುತ್ತಾರೆ. ಉತ್ತರಪ್ರದೇಶ, ಜಾರ್ಖಂಡ್ ರಾಜ್ಯದ ಮುಖ್ಯಮಂತ್ರಿಗಳು, ಆರೋಗ್ಯ ಸಚಿವರ ಜವಾಬ್ದಾರಿಯನ್ನು ಯಾವಾಗ ನಿರ್ಧರಿಸಲಾಗುತ್ತದೆ ಎಂದವರು ಪ್ರಶ್ನಿಸಿದ್ದಾರೆ.







