ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೆ.12ರಂದು ‘ಸಾಮರಸ್ಯ ನಡಿಗೆ’: ರಮಾನಾಥ್ ರೈ

ಬೆಂಗಳೂರು, ಸೆ.4: ದಕ್ಷಿಣ ಕನ್ನಡ ಜಿಲ್ಲೆಯ ಫರಂಗಿಪೇಟೆಯಿಂದ ಮಾಣಿವರೆಗೂ ಸೆ.12ರಂದು ‘ಸಾಮರಸ್ಯ ನಡಿಗೆ’ಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅರಣ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹತ್ಯೆ ಪ್ರಕರಣಗಳಲ್ಲಿ ನೇರವಾಗಿ ಭಾಗಿಯಾಗಿರುವ ಸಂಘಟನೆಗಳನ್ನು ಹೊರತುಪಡಿಸಿ, ಎಲ್ಲ ಸಂಘ ಸಂಸ್ಥೆಗಳು, ಧಾರ್ಮಿಕ ಮುಖಂಡರು, ಪ್ರಗತಿಪರರು ಸೇರಿ ಸಾಮರಸ್ಯ ನಡಿಗೆಯನ್ನು ಹಮ್ಮಿಕೊಂಡಿದ್ದಾರೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯ ಜನರು ಸುಶಿಕ್ಷಿತರು. ಕೆಲವು ಮತೀಯವಾದಿ ಶಕ್ತಿಗಳು ಸಾಮರಸ್ಯಕ್ಕೆ ಧಕ್ಕೆ ಮಾಡುತ್ತಿದ್ದಾರೆ. ಇತ್ತೀಚೆಗೆ ಮೂರು ಕೊಲೆಗಳು ನಡೆದಿವೆ. ಇದೆಲ್ಲವೂ ನಿಯೋಜಿತ ಹತ್ಯೆಗಳಾಗಿವೆ. ಈ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಪೊಲೀಸರು ಸೂಕ್ತ ಕ್ರಮ ತೆಗೆದುಕೊಂಡಿದ್ದಾರೆ ಎಂದು ರಮಾನಾಥ್ ರೈ ಹೇಳಿದರು.
ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆತಂಕದ ವಾತಾವರಣವಿತ್ತು. ಚುನಾವಣೆವರೆಗೂ ಅದೇ ವಾತಾವರಣವನ್ನು ಉಳಿಸಿಕೊಳ್ಳುವುದು ಬಿಜೆಪಿ ಉದ್ದೇಶವಾಗಿತ್ತು. ನಮ್ಮ ಜಿಲ್ಲೆ ಈಗ ಶಾಂತವಾಗಿದೆ. ಆದರೆ, ಬಿಜೆಪಿಯವರು ಅಲ್ಲಿನ ಸಾಮರಸ್ಯ ಹಾಳು ಮಾಡಲು ಬೈಕ್ ರ್ಯಾಲಿ ಮಾಡಲು ಹೊರಟಿದ್ದಾರೆ ಎಂದು ಅವರು ಆರೋಪಿಸಿದರು.
ಬಿಜೆಪಿಯ ಬೈಕ್ ರ್ಯಾಲಿಗೆ ನಮ್ಮ ವಿರೋಧವಿಲ್ಲ. ಆದರೆ, ಕಾನೂನು ಕೈಗೆತ್ತಿಕೊಂಡರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಕಾನೂನಿನ ಚೌಕಟ್ಟಿನಲ್ಲಿ ಅವರು ಕಾರ್ಯಕ್ರಮ ಮಾಡಿಕೊಳ್ಳಲಿ. ಬಿಜೆಪಿಯವರಿಗೆ ಮಂಗಳೂರು ‘ನಾಗ್ಪುರ’ವಿದ್ದಂತೆ. ಹೀಗಾಗಿ ಅಲ್ಲಿ ಮತೀಯ ಕ್ಷೇತ್ರ ಮಾಡಿಕೊಳ್ಳಲು ಮುಂದಾಗಿದ್ದಾರೆ. ಆದರೆ, ಅವರ ಉದ್ದೇಶಗಳು ಈಡೇರುವುದಿಲ್ಲ. ಇವರ ಯಾವುದೆ ನಾಟಕ ನಡೆಯುವುದಿಲ್ಲ ಎಂದು ಅವರು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮರಸ್ಯ ಸ್ಥಾಪಿಸಲು ಹುಬ್ಬಳ್ಳಿ-ಧಾರವಾಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಿಂದ ಬೈಕ್‌ಗಳಲ್ಲಿ ಬರುವ ಅಗತ್ಯವೇನಿದೆ. ಮಂಗಳೂರಿನಲ್ಲೆ ಕಾರ್ಯಕ್ರಮ ಮಾಡಿಕೊಳ್ಳಬಹುದಲ್ಲ ಎಂದು ಪ್ರಶ್ನಿಸಿದ ಅವರು, ಹಿಂದೂ ಸಂಘಟನೆಗಳ ಕಾರ್ಯಕರ್ತರಿಂದ ಹೆಚ್ಚಾಗಿ ಅನ್ಯಕೋವಿುನವರು ಹತ್ಯೆಯಾಗಿದ್ದಾರೆ ಎಂದರು.
ಕೋಮು ಸಂಘರ್ಷವನ್ನು ಹುಟ್ಟು ಹಾಕಿ ರಾಜಕೀಯ ಲಾಭ ಗಿಟ್ಟಿಸಿಕೊಳ್ಳಲು ಬಿಜೆಪಿ ಪ್ರಯತ್ನ ಮಾಡುತ್ತಿದೆ. ಇದಕ್ಕೆ ಜಿಲ್ಲೆಯ ಜನರು ಸಹಕಾರ ನೀಡುವುದಿಲ್ಲ ಎಂಬ ನಂಬಿಕೆಯಿದೆ. ಬೆಳಗ್ಗೆ ಸಂಘಪರಿವಾರದವರು, ಸಂಜೆ ಎಸ್‌ಡಿಪಿಐನವರು ನನ್ನ ರಾಜೀನಾಮೆಯನ್ನು ಕೇಳುತ್ತಾರೆ. ರಾಜ್ಯ ಸರಕಾರ ಒಳ್ಳೆಯ ಕೆಲಸಗಳನ್ನು ಮಾಡುತ್ತಿದೆ. ಅದನ್ನು ಸಹಿಸಿಕೊಳ್ಳಲು ಅವರಿಗೆ ಆಗುತ್ತಿಲ್ಲ. ಅಧಿಕಾರವಿಲ್ಲದೆ ಬಿಜೆಪಿಯವರು ಹತಾಶರಾಗಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.
ಪಿಎಫ್‌ಐ, ಕೆಎಫ್‌ಡಿ ಸಂಘಟನೆಗಳು, ಕೇರಳ, ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿವೆ. ಬಿಜೆಪಿಯವರು ಮಂಗಳೂರು ಚಲೋ ಬದಲು ದಿಲ್ಲಿ ಚಲೋ ಮಾಡಿ ಈ ಸಂಘಟನೆಗಳ ನಿಷೇಧಕ್ಕೆ ಕೇಂದ್ರದ ಮೇಲೆ ಒತ್ತಡ ಹೇರಲಿ ಎಂದು ರಮಾನಾಥ್ ರೈ ತಿರುಗೇಟು ನೀಡಿದರು.
ಆರೆಸೆಸ್ಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಪತ್ರಿಕಾಗೋಷ್ಠಿಯಲ್ಲಿ ಇದ್ದ ಯುವಕ ನಾಲ್ಕು ದಿನಗಳ ನಂತರ ಅಶ್ರಫ್ ಕೊಲೆ ಪ್ರಕರಣದಲ್ಲಿ ಬಂಧಿತನಾದ. ಅವರ ಮನಸ್ಥಿತಿ ಏನು ಎಂಬುದು ಇದರಲ್ಲಿ ಗೊತ್ತಾಗುತ್ತದೆ. ಮಂಗಳೂರು ಜೈಲಿನೊಳಗೆ ಮಾರಕಾಸ್ತ್ರಗಳನ್ನು ಬಿಸಾಕಿದ ಪ್ರಕರಣದಲ್ಲಿ ಬಿಜೆಪಿಯ ಮಾಜಿ ಗ್ರಾಮಪಂಚಾಯಿತಿ ಅಧ್ಯಕ್ಷ ಪ್ರಮುಖಆರೋಪಿ ಎಂದು ಅವರು ಹೇಳಿದರು.
ಕಲ್ಲಡ್ಕ ಪ್ರಭಾಕರ್ ಭಟ್ ನಡೆಸುತ್ತಿರುವುದು ಅನುದಾನಿತ ಶಾಲೆ. ಅವರು ಅರ್ಜಿ ನೀಡಿದರೆ ಸರಕಾರದಿಂದ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಪೂರೈಕೆ ಮಾಡಲಾಗುತ್ತದೆ. ಅದನ್ನು ಬಿಟ್ಟು 150 ಕಿ.ಮೀ.ದೂರವಿರುವ ಕೊಲ್ಲೂರು ಮೂಕಾಂಬಿಕೆ ದೇವಾಲಯದ ಅನುದಾನ ಬಯಸುವುದೇಕೆ. ಮಾಜಿ ಸಚಿವ ಜನಾರ್ದನ ರೆಡ್ಡಿ ನೀಡುವ ಆರ್ಥಿಕ ಸಹಾಯ ಪಡೆಯುವ ಪ್ರಭಾಕರ್‌ಭಟ್‌ಗೆ ಸರಕಾರದ ನೆರವು ಯಾಕೆ ಬೇಡ ಎಂದು ರಮಾನಾಥ್ ರೈ ಪ್ರಶ್ನಿಸಿದರು.
ನಾನು ಜೈಲಿಗೆ ಹೋಗಿಲ್ಲ
ನಾನು ಮತೀಯವಾದಿಯು ಅಲ್ಲ, ಜಾತೀವಾದಿಯು ಅಲ್ಲ. ಎರಡು ಮತೀಯ ವಾದಿಗಳನ್ನ ನಾನು ವಿರೋಧ ಮಾಡುತ್ತೇನೆ. ನಾನು ಜಾತ್ಯತೀತ ತತ್ವವನ್ನು ನಂಬಿಕೊಂಡು ಕೆಲಸ ಮಾಡುತ್ತಿದ್ದೇನೆ. ರಾಜೀನಾಮೆ ನೀಡೋದಕ್ಕೆ ನಾನೇನು ತಪ್ಪು ಮಾಡಿದ್ದೇನೆ. ನಾನೇನು ಜೈಲಿಗೂ ಹೋಗಿಲ್ಲ, ಬ್ಲೂ ಫಿಲಂ ನೋಡಿಲ್ಲ, ಗಣಿಗಾರಿಕೆಯಲ್ಲಿ ಲೂಟಿ ಮಾಡಿಲ್ಲ ಮತ್ತೇಕೆ ನಾನು ರಾಜೀನಾಮೆ ನೀಡಬೇಕು.
-ರಮಾನಾಥ್ ರೈ ಅರಣ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ
ಮಂಗಳೂರಿನ ಬಿಜೆಪಿ ರ್ಯಾಲಿಗೆ ನಮ್ಮದೇನು ತಕರಾರು ಇಲ್ಲ. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಲು ಸ್ಥಳೀಯ ಪೊಲೀಸರಿಗೆ ಸೂಚನೆ ನೀಡಲಾಗಿದೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ







