ಬಿಜೆಪಿ, ಕಾಂಗ್ರೆಸ್ ರಾಜ್ಯದಲ್ಲಿ ಕೋಮುಗಲಭೆ ಮಾಡುವ ಮೂಲಕ ಜಾತಿ ರಾಜಕೀಯ ಮಾಡುತ್ತಿವೆ :ದೇವೇಗೌಡ

ಹರಪನಹಳ್ಳಿ,ಸೆ.4:ಬಿಜೆಪಿ, ಕಾಂಗ್ರೆಸ್ ರಾಜ್ಯದಲ್ಲಿ ಕೋಮುಗಲಭೆ ಮಾಡುವ ಮೂಲಕ ಜಾತಿ ರಾಜಕೀಯ ಮಾಡುತ್ತಿವೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಪ್ರಾದೇಶಿಕ ಪಕ್ಷ ಬೆಂಬಲಿಸಿ ಎಂದು ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ದೇವೇಗೌಡರು ಹೇಳಿದರು.
ಪಟ್ಟಣದ ತರಳಬಾಳು ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ತಾಲೂಕು ಜೆಡಿಎಸ್ ಘಟಕದ ಕಾರ್ಯಕಾರಣಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಜೆಡಿಎಸ್ ಪಕ್ಷಕ್ಕೆ ಭದ್ರ ಬುನಾದಿ ನೀಡಿದ ಹರಪನಹಳ್ಳಿಯನ್ನು ನಾನು ಎಂದಿಗೂ ಮರೆಯುವಂತಿಲ್ಲ. ಒಂದು ಕಾಲದಲ್ಲಿ ಹರಪನಹಳ್ಳಿಯಿಂದಲೇ ರಾಜ್ಯದಲ್ಲಿ ನಮ್ಮ ಪಕ್ಷಕ್ಕೆ ಹೆಸರು ಬಂದಿದೆ. ಅಂದಿನ ಈ ಭಾಗದ ಧೀಮಂತ ನಾಯಕ ದಿ.ಎಂ.ಪಿ. ಪ್ರಕಾಶ್ ರವರು ನಮ್ಮ ಪಕ್ಷ ತೊರೆದು ಕಾಂಗ್ರೇಸ್‍ಗೆ ಹೋದಾಗಲೇ ಈ ಭಾಗದಲ್ಲಿ ನಮ್ಮ ಜೆಡಿಎಸ್ ಪಕ್ಷ ತೊರೆಯಿತು ಎಂದ ಅವರು, ಬಳ್ಳಾರಿ ಜಿಲ್ಲೆಯಿಂದ ಬೇರ್ಪಟ್ಟ ಹರಪನಹಳ್ಳಿಯನ್ನು 370ಜೆ ಕಲಂಗೆ ಸೇರ್ಪಡೆ ವಿಚಾರವನ್ನು ಪ್ರಧಾನಿ ಮೋದಿಯವರಿಗೆ ಮನವಿ ಕಳಿಸಿ ಇದರ ಬಗ್ಗೆ ಹೋರಾಟ ಮಾಡುತ್ತೇನೆ ಎಂದು ಅವರು ತಿಳಿಸಿದರು.
ಕೇವಲ ಇದು ನಮ್ಮ ಕುಟುಂಬಕ್ಕೆ ಸಂಬಂಧಿಸಿದ ಪಕ್ಷವಲ್ಲ. ರಾಜ್ಯದ ಪ್ರತಿ ಆರು ಕೋಟಿ ಕನ್ನಡಿಗರ ಪಕ್ಷ. ಈ ಬಾರಿ ಜೆಡಿಎಸ್‍ಗೆ ಪ್ರತಿಯೊಬ್ಬರು ಕೈ ಜೋಡಿಸಿದರೆ 120ಕ್ಕೂ ಹೆಚ್ಚು ಸ್ಥಾನವನ್ನು ಪಡೆದು ರಾಜ್ಯದಲ್ಲಿ ಅಧಿಕಾರ ನಡೆಸುತ್ತೇವೆ ಎಂದ ಅವರು, ನಾನು ನನ್ನ ರಾಜ್ಯದ ಜನತೆಗೆ ಸರಿಯಾಗಿ ಕುಡಿಯುವ ನೀರು ಸಿಗದ ಹಿನ್ನಲೆಯಲ್ಲಿ ನನ್ನ ಮಂತ್ರಿ ಸ್ಥಾನಕ್ಕೆ ಎರಡು ಬಾರಿ ರಾಜೀನಾಮೆ ನೀಡಿ ರಾಜ್ಯದ ಜನತೆಯ ಒಳತಿಗಾಗಿ ಹೋರಾಟ ಮಾಡಿದ್ದರೂ ನನ್ನನ್ನು ಜನರು ದೂರ ತಳ್ಳಿದ್ದಾರೆ ಎಂದರು.
ಮಾಜಿ ವಿಧಾನಪರಿಷತ್ ಸದಸ್ಯ ಹೆಚ್.ಸಿ. ನೀರಾವರಿ ಮಾತನಾಡಿ, ರಾಷ್ಟ್ರೀಯ ಪಕ್ಷಗಳು ಕೇವಲ ಅಧಿಕಾರಕ್ಕಾಗಿ ಹೋರಾಟ ನಡೆಸುತ್ತಿವೆ. ಆದರೆ, ಜೆಡಿಎಸ್ ಪಕ್ಷ ಜನರ ಕಳಕಳೆಯನ್ನು ಹೊಂದಿದ್ದು ಬಡವರ ಪರವಾಗಿ ಹೋರಾಟ ಮಾಡುತ್ತಿದೆ ಎಂದ ಅವರು, ಪಕ್ಷ ಈ ಕ್ಷೇತ್ರಕ್ಕೆ ಉತ್ತಮವಾದ ವ್ಯಕ್ತಿಯನ್ನು ಆಯ್ಕೆ ಮಾಡಲಿದ್ದು ಅವರ ಗೆಲುವಿಗಾಗಿ ಅಲ್ಲ. ಪಕ್ಷದ ಗೆಲುವಿಗಾಗಿ ಎಲ್ಲರೂ ದುಡಿಯಬೇಕು ಎಂದರು.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಹ್ಮದ್ ಜಾಫರ್‍ಖಾನ್ ಮಾತನಾಡಿ, ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ಜೆಡಿಎಸ್ ಪ್ರಾದೇಶಿಕ ಪಕ್ಷವಿದೆ. ಕಾಂಗ್ರೇಸ್, ಬಿಜೆಪಿಯವರು ಮಾಡುತ್ತಿರುವ ಕೆಲಸಗಳನ್ನು ಹೇಳಿಕೊಳ್ಳಲು 5 ವರ್ಷಗಳು ಸಾಲುವುದಿಲ್ಲ. ಬದಲಾಗಿ ಅವರ ಬಗ್ಗೆ ಮಾತನಾಡಿ ಸಮಯ ಹಾಳು ಮಾಡಿಕೊಳ್ಳುವ ಬದಲು ಕನ್ನಡಿಗರ ಪಕ್ಷವಾದ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಮೂಲಕ ಕನ್ನಡದ ಸ್ವಾಭಿಮಾನವನ್ನು ಹೆಚ್ಚಿಸುವ ಕೆಲಸ ಆಗಬೇಕು. ದೇಶ, ರಾಜ್ಯವನ್ನು ಉಳಿಸುವ ನಿಟ್ಟಿನಲ್ಲಿ ಪ್ರಾದೇಶಿಕ ಪಕ್ಷವಾದ ಜಾತ್ಯಾತೀತ ಪಕ್ಷ ಜೆಡಿಎಸ್ ಅನಿವಾರ್ಯವಾಗಿದೆ. ಕುಮಾರಣ್ಣನ ಬಲವನ್ನು ಹೆಚ್ಚಿಸಲು ಕಾರ್ಯಕರ್ತರು, ಮುಖಂಡರಲ್ಲಿನ ಭೀನ್ನಾಭಿಪ್ರಾಯ ಬದಿಗಿಟ್ಟು ಸಂಪೂರ್ಣ ಬಹುಮತದಿಂದ ಗೆಲ್ಲಿಸಿ ಎಂದರು.
ತಾಲೂಕಿನ ದುಗ್ಗಾವತಿಯಿಂದ ಯುವಕರು ದ್ವಿಚಕ್ರ ವಾಹನಗಳ ಮೂಲಕ ಜೆಡಿಎಸ್‍ನ ರಾಷ್ಟ್ರೀಯ ಅಧ್ಯಕ್ಷ ಮತ್ತು ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ. ದೇವೆಗೌಡರನ್ನು ಮೇರವಣಿಗೆ ಮುಖಾಂತರ ಸ್ವಾಗತ ಕೋರಿದರು.
ಕಾರ್ಯಕ್ರಮದಲ್ಲಿ ಹರಿಹರ ಶಾಸಕ ಶಿವಶಂಕರ, ವಿಧಾನಪರಿಷತ್ ಸದಸ್ಯ ರಮೇಶ್‍ಬಾಬು, ಪ್ರಧಾನ ಕಾರ್ಯದರ್ಶಿ ಕಲ್ಲೇರ ರುದ್ರೇಶ್, ಪಾಟೀಲ್ ಬೆಟ್ಟನಗೌಡ್ರು, ಹೆಚ್.ಟಿ. ಶ್ರೀಪತಿ, ಪರಮೇಶ್ವರಪ್ಪ, ಜೆಡಿಎಸ್ ತಾಲೂಕು ಅಧ್ಯಕ್ಷ ಚನ್ನಬಸವನಗೌಡ್ರು, ಶೀಲಾಕುಮಾರಿ, ಬಳಿಗನೂರು ರಾಮನಗೌಡ, ಶಿಕಾರಿ ಬಾಲಪ್ಪ, ಚಿದಾನಂದಪ್ಪ, ಸುರೇಶ್, ನಿಖಿಲ್‍ಕುಮಾರ, ಡಂಕಿ ಇಮ್ರಾನ್, ವಾಗೀಶ್, ಮತ್ತಿತರರು ಇದ್ದರು.







