ಲಕ್ಷ್ಮೀ ಹೆಬ್ಬಾಳ್‍ಕರ್ ಗಡಿಪಾರಿಗೆ ಆಗ್ರಹಿಸಿ ಧರಣಿ

ದಾವಣಗೆರೆ,ಸೆ.4: ಲಕ್ಷ್ಮೀ ಹೆಬ್ಬಾಳ್‍ಕರ್ ಅವರನ್ನು ಗಡಿಪಾರು ಮಾಡುವಂತೆ ಆಗ್ರಹಿಸಿ ನಗರದಲ್ಲಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಬಿಜೆಪಿ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿದ ಕಾರ್ಯಕರ್ತರು ಉಪವಿಭಾಗಾಧಿಕಾರಿ ಮುಖೇನಾ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷೆ ಎಚ್.ಸಿ. ಜಯಮ್ಮ ಮಾತನಾಡಿ, ಬೆಳಗಾವಿಯು ತಾಯಿ ಭುವನೇಶ್ವರಿಯ ಅವಿಭಾಜ್ಯ ಅಂಗವಾಗಿದೆ. ಕರ್ನಾಟಕ ಏಕೀಕರಣಕ್ಕಾಗಿ ಅನೇಕ ಮಹಾನೀಯರು ತಮ್ಮ ಜೀವನವನ್ನು ಮುಡುಪಾಗಿಟ್ಟು, ಕನ್ನಡ, ನಾಡು ನುಡಿ ನೆಲ ಜಲದ ಹಿರಿಮೆಗಾಗಿ ನಿರಂತರ ಹೋರಾಟ ಮಾಡುತ್ತಾ ಬಂದಿದ್ದಾರೆ. ಬೆಳಗಾವಿ ವಿಷಯದಲ್ಲಿ ಕರ್ನಾಟಕದ ಜನರು ಭಾವನಾತ್ಮಕವಾಗಿ ಚಿಂತಿಸುತ್ತಾರೆ. ಆದರೆ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್‍ಕರ್ ವಿವಾದತ್ಮಕ ಹೇಳಿಕೆ ನೀಡಿ ಕನ್ನಡ ನಾಡಿನ ಜನರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡ ವಿರೋಧಿ ಹೇಳಿಕೆ ನೀಡಿರುವ ಲಕ್ಷ್ಮೀ ಹೆಬ್ಬಾಳ್‍ಕರ್ ಅವರನ್ನು ಕೂಡಲೇ ಗಡಿಪಾರು ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ಚೇತನ ಶಿವುಕುಮಾರ್, ರಾಜ್ಯ ಕಾರ್ಯದರ್ಶಿ ಕೆ.ಜಿ. ಜಯಲಕ್ಷ್ಮೀ ಮಹೇಶ್, ಶಾಂತ ದೋರೈ, ಸರೋಜಮ್ಮ ದಿಕ್ಷೀತ್, ಪ್ರಭಾವತಿ, ಎಚ್.ಎಂ. ಅನಿತಾ, ಆರ್.ನಾಗರತ್ನಮ್ಮ, ಎಲ್.ಕೆ.ಪ್ರೇಮಾ, ಕೆ.ವಿ.ಲೀಲಾವತಿ, ಮಂಜುಳಾಬಾಯಿ, ಆರ್.ಎಲ್. ದೇವಿರಮ್ಮ, ಲಲಿತಾ ಸ್ವಾಮಿ, ಶಾಂತಮ್ಮ, ಶ್ವೇತಾ, ಅಕ್ಕಮ್ಮ, ಸುಶೀಲಮ್ಮ, ರಾಜೇಶ್ವರಿ, ವಾಣಿ, ಶೀಲಾಬಾಯಿ, ಭಾಗ್ಯಮ್ಮ ದೇವರಾಜ್, ಸರ್ವಮಂಗಳ ಪ್ರಕಾಶ್, ಉಮಾ ಕೊಟ್ರೇಗೌಡ್ರು, ಮಂಜಮ್ಮ ಕಮಲನಾಯ್ಕ್ ಮತ್ತಿತರರು ಇದ್ದರು.







