ಪ್ರತಿಭೆ ಗುರುತಿಸುವಲ್ಲಿ ಶಿಕ್ಷಕರ ಪಾತ್ರ ಮುಖ್ಯ: ದಿನಕರ ಬಾಬು

ಉಡುಪಿ, ಸೆ.4: ಶಾಲಾ ಹಂತದಲ್ಲಿಯೆ ಮಕ್ಕಳಲ್ಲಿ ಹುದುಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸುವಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯ ಎಂದು ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಹೇಳಿದ್ದಾರೆ.
ಸೋಮವಾರ ಉದ್ಯಾವರದ ಸೈಂಟ್ ಪ್ರಾನ್ಸಿಸ್ ಪ್ರೌಢ ಶಾಲೆಯಲ್ಲಿ ನಡೆದ ಕಾಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾ ಟಿಸಿ ಅವರು ಮಾತನಾಡುತಿದ್ದರು.
ನಮ್ಮ ಜಿಲ್ಲೆ ಶಿಕ್ಷಣ ಮತ್ತು ಆರೋಗ್ಯ, ಕ್ರೀಡೆಯಲ್ಲಿ ಗಣನೀಯವಾದ ಸಾಧನೆ ಮಾಡುವುದರಲ್ಲಿ ಶಿಕ್ಷಕರ ಪಾತ್ರ ಹಿರಿದಾಗಿದೆ. ಜಿಲ್ಲೆಯು ಸ್ವಚ್ಛತೆ ಮತ್ತು ತ್ಯಾಜ್ಯ ಮುಕ್ತ ಜಿಲ್ಲೆಯಾಗಬೇಕಾದರೆ ಶಿಕ್ಷಕರು ಗಣನೀಯವಾದ ಪಾತ್ರ ವಹಿಸ ಬೇಕಾಗಿದೆ. ಮಕ್ಕಳಲ್ಲಿ ಪರಿಸರ ಮತ್ತು ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಿ ಮನೆಯಲ್ಲಿ ಅದನ್ನು ಮಾಡುವಂತೆ ಪ್ರೇರಣೆ ನೀಡುವಂತೆ ಅಧ್ಯಕ್ಷರು ಹೇಳಿದರು.
ತಾವು ತಮ್ಮ ಶಾಲಾ ದಿನಗಳನ್ನು ಇದೇ ಶಾಲೆಯಲ್ಲಿ ಕಲಿತ ಕುರಿತು ತಿಳಿಸಿದ ದಿನಕರ ಬಾಬು, ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಎಲ್ಲಾ ಶಿಕ್ಷಕರಿಗೆ ಶುಭಾಶಯ ಸಲ್ಲಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚರ್ಚ್‌ನ ಧರ್ಮಗುರುಗಳು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಾವರ ಗ್ರಾಪಂ ಅಧ್ಯಕ್ಷೆ ಸುಗಂಧಿ ಶೇಖರ್ ಮತ್ತು ಶಾಲಾ ಮುಖ್ಯೋಪಾಧ್ಯಾಯರು, ಆಡಳಿತ ಮಂಡಳಿ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.





