ಅಂಧ ಮಕ್ಕಳ ಅತ್ಯಾಚಾರ ಎಸಗಿದ ಬ್ರಿಟಿಶ್ ಪ್ರಜೆ

ಹೊಸದಿಲ್ಲಿ, ಸೆ. 4: ದಿಲ್ಲಿಯಲ್ಲಿ ಅಂಧರಿಗಾಗಿರುವ ರಾಷ್ಟ್ರೀಯ ಸಂಸ್ಥೆ (ಎನ್‌ಎಬಿ)ಯಲ್ಲಿ ಮೂವರು ಅಂಧ ಮಕ್ಕಳ ಮೇಲೆ 54ರ ಹರೆಯದ ಬ್ರಿಟಿಶ್ ವ್ಯಕ್ತಿಯೋರ್ವ ಅತ್ಯಾಚಾರ ಎಸಗಿದ ಘಟನೆ ನಡೆಸಿದೆ.
ಆರೋಪಿ ಬ್ರಿಟಿಶ್ ಪ್ರಜೆ ಮುರ್ರೆ ವಾರ್ಡ್‌ನ ಲ್ಯಾಪ್‌ಟಾಪ್‌ನಲ್ಲಿ ಆಕ್ಷೇಪಾರ್ಹ ಅಂಶಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ವಾರ್ಡ್ ಶಿಶು ಕಾಮಿ. ಆತನ ಮೊಬೈಲ್ ಅನ್ನು ಪರಿಶೀಲಿಸಲಾಗಿದೆ ಎಂದು ಪೊಲೀಸ್ ಹೆಚ್ಚುವರಿ ಉಪ ಆಯುಕ್ತ ಚಿನ್ಮಯ್ ಬಿಸ್ವಾಸ್ ತಿಳಿಸಿದ್ದಾರೆ.
ಕಳೆದ 9 ವರ್ಷಗಳಿಂದ ವಾರ್ಡ್ ಎನ್‌ಎಬಿಯ ದಾನಿ. ಸಂಸ್ಥೆಯ ಕಚೇರಿಗೆ ಆತ ಆಗಾಗ ಭೇಟಿ ನೀಡುತ್ತಿದ್ದ. ಇಂಗ್ಲೆಂಡ್‌ನ ಗ್ಲೂಸೆಸ್ಟರ್‌ಶೈರ್‌ನ ನಿವಾಸಿಯಾಗಿರುವ ವಾರ್ಡ್ ಎಪ್ರಿಲ್‌ನಿಂದ ಗೊರೇಗಾಂವ್‌ನ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಫೆಬ್ರವರಿಯಲ್ಲಿ ಆತ ಪಕ್ಷವಾತಕ್ಕೆ ಗುರಿಯಾಗಿದ್ದ. ಅಂದಿನಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ರವಿವಾರ ಅಪರಾಹ್ನ ವಾರ್ಡ್ ಮಕ್ಕಳ ಮೇಲೆ ಅತ್ಯಾಚಾರ ಎಸಗಿದ ಬಗ್ಗೆ ಎನ್‌ಎಬಿ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ವಸಂತ್‌ಕುಂಜದ ಮನೆಯಿಂದ ವಾರ್ಡ್‌ನನ್ನು ಬಂಧಿಸಲಾಗಿದೆ. ಹಾಗೂ ವಿಚಾರಣೆಗೆ ಕೋರಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.





