ಸೆ.6ರವರೆಗೆ ಬಿಎಸ್‌ವೈ ಬಂಧಿಸದಂತೆ ಎಸಿಬಿಗೆ ಹೈಕೋರ್ಟ್ ಆದೇಶ
ಮಾಜಿ ಸಿಎಂ ಬಿಎಸ್‌ವೈ ವಿರುದ್ಧದ ಡಿ-ನೋಟಿಫಿಕೇಷನ್ ಪ್ರಕರಣ

ಬೆಂಗಳೂರು, ಆ.4: ಶಿವರಾಮ ಕಾರಂತ ಬಡಾವಣೆಯ ಅಕ್ರಮ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಸೆಪ್ಟೆಂಬರ್ 6ರವರೆಗೆ ಬಂಧಿಸದಂತೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಕ್ಕೆ ಹೈಕೋರ್ಟ್ ಆದೇಶಿಸಿ ವಿಚಾರಣೆಯನ್ನು ಮುಂದೂಡಿದೆ. ಡಾ.ಕೆ.ಶಿವರಾಮ ಕಾರಂತ ಬಡಾವಣೆಯ ಡಿ-ನೋಟಿಫಿಕೇಷನ್ ಪ್ರಕರಣ ಸಂಬಂಧ ತಮ್ಮ ವಿರುದ್ಧ ಎಸಿಬಿ ದಾಖಲಿಸಿರುವ ಎರಡು ಎಫ್‌ಐಆರ್‌ಗಳ ರದ್ದು ಕೋರಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿತು.
ಎಸಿಬಿ ಪರ ವಾದಿಸಿದ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್ ಅವರು, ಡಾ.ಕೆ.ಶಿವರಾಮ ಕಾರಂತ ಬಡಾವಣೆಯ ನಿರ್ಮಾಣಕ್ಕಾಗಿ ವಶಪಡಿಸಿಕೊಂಡಿದ್ದ ಜಮೀನಿನ ಪೈಕಿ 257 ಎಕರೆ 20.5 ಗುಂಟೆ ಜಮೀನನ್ನು ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಲು ಆದೇಶಿಸಿದ್ದರು. ಹೀಗಾಗಿ, ಈ ಎರಡು ಎಫ್‌ಐಆರ್‌ಗಳನ್ನು ರದ್ದುಗೊಳಿಸಬಾರದು ಎಂದು ಪೀಠಕ್ಕೆ ತಿಳಿಸಿದರು. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಡಾ.ಕೆ.ಶಿವರಾಮ ಕಾರಂತ ಬಡಾವಣೆಯ ನಿರ್ಮಾಣಕ್ಕಾಗಿ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ(ಬಿಡಿಎ) ವಶಪಡಿಸಿಕೊಂಡಿದ್ದ ಜಮೀನಿನ ಪೈಕಿ 257 ಎಕರೆ 20.5 ಗುಂಟೆ ಜಮೀನನ್ನು ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಲು ಅಕ್ರಮವಾಗಿ ಆದೇಶಿಸಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಎಸಿಬಿ ಎಫ್‌ಐಆರ್ ದಾಖಲಿಸಿದೆ. ಈ ಎಫ್‌ಐಆರ್ ರದ್ದುಪಡಿಸಬೇಕು ಎಂದು ಯಡಿಯೂರಪ್ಪ ಕೋರಿರುವ ರಿಟ್ ಅರ್ಜಿ ಇದಾಗಿದೆ. ವಿಚಾರಣೆಯನ್ನು ಸೆ.6ಕ್ಕೆ ಮುಂದೂಡಿದೆ.







