ದಂಡುಪಾಳ್ಯದ ನಾಲ್ವರು ಸದಸ್ಯರಿಗೆ ಜೀವಾವಧಿ ಶಿಕ್ಷೆ
ಮೂಡಲಪಾಳ್ಯದ ಸುಧಾಮಣಿ ಕೊಲೆ, ದರೋಡೆ ಪ್ರಕರಣ

ಬೆಂಗಳೂರು, ಆ.4: ಮಹಿಳೆಯೊಬ್ಬರನ್ನು ಹತ್ಯೆಗೈದು ದರೋಡೆ ಮಾಡಿದ್ದ ಪ್ರಕರಣದಲ್ಲಿ ದಂಡುಪಾಳ್ಯ ತಂಡದ ಸದಸ್ಯರಾದ ವೆಂಕಟೇಶ್, ಮುನಿಕೃಷ್ಣ, ನಲ್ಲತಿಮ್ಮ ಮತ್ತು ಲಕ್ಷ್ಮೀಗೆ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ನಗರದ ಮೂಡಲಪಾಳ್ಯದ ನಿವಾಸಿ ಸುಧಾಮಣಿ ಎಂಬವರ ದರೋಡೆ ಪ್ರಕರಣ ಸಂಬಂಧ ದಂಡುಪಾಳ್ಯ ತಂಡದ ನಾಲ್ವರು ಸದಸ್ಯರಿಗೆ ಅಧೀನ ನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆ ಕಾಯಂಗೊಳಿಸುವಂತೆ ಕೋರಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಮತ್ತು ಪ್ರಕರಣದಿಂದ ತಮ್ಮನ್ನು ಖುಲಾಸೆಗೊಳಿಸಬೇಕು ಎಂದು ಕೋರಿ ವೆಂಕಟೇಶ್, ಮುನಿಕೃಷ್ಣ, ನಲ್ಲತಿಮ್ಮ ಮತ್ತು ಲಕ್ಷ್ಮೀ ಸಲ್ಲಿಸಿದ್ದ ಪ್ರತ್ಯೇಕ ಮೇಲ್ಮನವಿಗಳ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಮೂರ್ತಿ ರವಿ ಮಳೀಮಠ ಮತ್ತು ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಅವರಿದ್ದ ವಿಭಾಗೀಯ ಪೀಠ, ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ಕಡಿತಗೊಳಿಸಿತು.
1999ರ ಅ.28ರಂದು ಮೂಡಲಪಾಳ್ಯದಲ್ಲಿ ಸುಧಾಮಣಿ ಎಂಬುವರನ್ನು ತಮ್ಮ ಮನೆಯಲ್ಲಿ ಕೊಲೆ ಮಾಡಿ ದರೋಡೆ ನಡೆಸಲಾಗಿತ್ತು. ಪ್ರಕರಣ ಸಂಬಂಧ ಮೃತರ ಸಂಬಂಧಿ ಪ್ರಕಾಶ್ ವಿಷ್ಣು ಎಂಬವರು ವಿಜಯನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ್ದ ಪೊಲೀಸರು, ವೆಂಕಟೇಶ, ಮುನಿಕೃಷ್ಣ, ನಲ್ಲತಮ್ಮ ಮತ್ತು ಲಕ್ಷ್ಮೀ ವಿರುದ್ಧ ಕೊಲೆ ಹಾಗೂ ದರೋಡೆ ಆರೋಪ ಸಂಬಂಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆದರೆ, ಅಧೀನ ನ್ಯಾಯಾಲಯವು ಕೊಲೆ ಆರೋಪ ಕೈ ಬಿಟ್ಟು, ದರೋಡೆ ಪ್ರಕರಣವನ್ನೇ ಅಪರೂಪದಲ್ಲಿಯೇ ಅಪರೂಪ ಪ್ರಕರಣ ಎಂದು ಅಭಿಪ್ರಾಯಪಟ್ಟು ಈ ನಾಲ್ವರಿಗೆ ಗಲ್ಲು ಶಿಕ್ಷೆ ವಿಧಿಸಿ 2004 ಡಿ.16ರಂದು ಆದೇಶಿಸಿತ್ತು.







