ಬಂಟ್ವಾಳ: ಪೊಲೀಸ್ ಕಾರ್ಯಾಚರಣೆಯ ಸತ್ಯಾಸತ್ಯತೆಯ ಬಹಿರಂಗಗೊಳಿಸಲು ಮುಸ್ಲಿಂ ಮುಖಂಡರ ಆಗ್ರಹ
ಮಂಗಳೂರು, ಸೆ. 4: ಬಂಟ್ವಾಳದಲ್ಲಿ ಈ ಹಿಂದೆ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖಲಂದರ್ ಮನೆಯಲ್ಲಿ ಪೊಲೀಸರು ಸರ್ಚ್ ವಾರಂಟ್ ಪಡೆದು ಮನೆಯಲ್ಲಿ ತಪಾಸಣೆ ನಡೆದ ಸಂದರ್ಭ ಪವಿತ್ರ ಗ್ರಂಥಕ್ಕೆ ಅವಮಾನವಾಗಿದೆ ಎಂದು ಮನೆಯವರು ನಮ್ಮ ಬಳಿ ಪೊಲೀಸರ ವಿರುದ್ಧ ಆರೋಪ ಮಾಡಿದ್ದು, ಈ ಪ್ರಕರಣದ ಸತ್ಯಾಸತ್ಯತೆಯನ್ನು ತಿಳಿಯಲು ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳಿಂದ ತನಿಖೆಯಾಗಬೇಕಾಗಿದೆ ಎಂದು ಆಗ್ರಹಿಸುವುದಾಗಿ ಕೆಪಿಸಿಸಿಯ ಕರಾವಳಿ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಯು.ಬಿ.ಸಲೀಂ, ಮುಸ್ಲಿಂ ಸೆಂಟ್ರಲ್ ಕಮಿಟಿಯ ಹಿರಿಯ ಉಪಾಧ್ಯಕ್ಷ ಕೋಡಿಜಾಲ್ ಇಬ್ರಾಹೀಂ, ಸುನ್ನಿ ಮದರಸ ಆಡಳಿತ ಸಮಿತಿಯ ರಾಜ್ಯಾಧ್ಯಕ್ಷ ಮುಮ್ತಾಝ್ ಅಲಿ ಪತ್ರಿಕೆಗೆ ತಿಳಿಸಿದ್ದಾರೆ.
ಪವಿತ್ರ ಗ್ರಂಥಕ್ಕೆ ಪೊಲೀಸರು ತಪಾಸಣೆಯ ವೇಳೆ ಅವಮಾನ ಮಾಡಿಲ್ಲ, ನಮ್ಮ ಬಳಿ ದಾಖಲೆ ಇದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಖಲಂದರ್ ಮನೆಯ ತಪಾಸಣೆಯ ವೇಳೆ ಪೊಲೀಸರಿಂದ ಪವಿತ್ರ ಕುರ್ ಆನ್‌ಗೆ ಅಪಮಾನವಾಗಿದ್ದರೆ ಅದು ಖಂಡನೀಯ. ಆದರೆ ಸಾರ್ವಜನಿಕ ವಲಯದಲ್ಲಿ ಈ ಬಗ್ಗೆ ಗೊಂದಲ ನಿರ್ಮಾಣವಾಗಿರುವುದರಿಂದ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಪೊಲೀಸರ ಕಾರ್ಯಾಚರಣೆಯ ಬಗ್ಗೆ ಐಜಿಪಿ ಅಥವಾ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳಿಂದ ಸಮಗ್ರ ತನಿಖೆ ನಡೆಯಬೇಕಾಗಿದೆ ಎಂದು ಆಗ್ರಹಿಸುವುದಾಗಿ ಯು.ಬಿ.ಸಲೀಂ ತಿಳಿಸಿದ್ದಾರೆ.







