ಆರ್‌ಬಿಐ, ಬೀರೂರು ಠಾಣಾ ಪೊಲೀಸರಿಗೆ ಹೈಕೋರ್ಟ್ ನೋಟಿಸ್
ಹಳೆಯ ನೋಟುಗಳನ್ನು ಹೊಸ ನೋಟುಗಳಿಗೆ ವಿನಿಮಯ ಮಾಡಿಕೊಡಲು ಅರ್ಜಿ ಸಲ್ಲಿಕೆ
ಬೆಂಗಳೂರು, ಆ.3: ಕಳುವು ಪ್ರಕರಣವೊಂದರಲ್ಲಿ ನ್ಯಾಯಾಲಯದ ವಶದಲ್ಲಿದ್ದ ಹಳೆಯ ನೋಟುಗಳನ್ನು ಹೊಸ ನೋಟುಗಳಿಗೆ ವಿನಿಮಯ ಮಾಡಿಕೊಡಲು ಭಾರತೀಯ ರಿಸರ್ವ್ ಬ್ಯಾಂಕ್‌ಗೆ (ಆರ್‌ಬಿಐ) ನಿರ್ದೇಶಿಸುವಂತೆ ಕೋರಿ ಸೆಂಟ್ರಲ್ ಅಕ್ರೊನಾಟ್ ಅಂಡ್ ಕೊಕೊ ಮಾರ್ಕೆಟಿಂಗ್ ಅಂಡ್ ಪ್ರಾಸೆಸಿಂಗ್ ಕೋ ಆಪರೇಟಿವ್ ಲಿಮಿಟೆಡ್(ಕ್ಯಾಂಪ್ಕೊ) ಹೈಕೋರ್ಟ್ ಮೆಟ್ಟಿಲೇರಿದೆ.
ಈ ಸಂಬಂಧ ಕ್ಯಾಂಪ್ಕೊ ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ಪೀಠ, ಪ್ರತಿವಾದಿಗಳಾದ ಆರ್‌ಬಿಐ ಹಾಗೂ ಬೀರೂರು ಠಾಣಾ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.
ಪ್ರಕರಣವೇನು: 2015ರ ಎ.18ರಂದು ಶಿವಮೊಗ್ಗದ ಕ್ಯಾಂಪ್ಕೊ ಪ್ರಧಾನ ವ್ಯವಸ್ಥಾಪಕರು ತಮ್ಮ ಶಾಖೆಯಲ್ಲಿ 4,82,896 ರೂ. ಗಳು ಕಳುವಾಗಿರುವ ಸಂಬಂಧ ಬೀರೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ಸಂಬಂಧ ತನಿಖೆ ನಡೆಸಿದ್ದ ಪೊಲೀಸರು ಕ್ಯಾಂಪ್ಕೊ ಸಂಸ್ಥೆಯ ಮೂವರು ಸಿಬ್ಬಂದಿಗಳನ್ನು ಬಂಧಿಸಿ ಅವರಿಂದ 2,53,150 ರೂ. ಗಳನ್ನು ವಶಕ್ಕೆ ಪಡೆದಿದ್ದರು. ವಶಪಡಿಸಿಕೊಂಡ ಹಣದ ಮಹಜರು ನಡೆಸಿ ಅದನ್ನು ಅಧೀನ ನ್ಯಾಯಾಲಯದ ಸುಪರ್ದಿಗೆ ನೀಡಲಾಗಿತ್ತು.
ಈ ಹಣವನ್ನು ಬಿಡುಗಡೆ ಮಾಡುವಂತೆ ಕೋರಿ ಕ್ಯಾಂಪ್ಕೊ ಸಲ್ಲಿಸಿದ್ದ ಅರ್ಜಿಯನ್ನು ಅಧೀನ ನ್ಯಾಯಾಲಯ ವಜಾಗೊಳಿಸಿತ್ತು. ಅಧೀನ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಕ್ಯಾಂಪ್ಕೊ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಅರ್ಜಿದಾರರ ಹಣ ಬಿಡಗಡೆ ಮಾಡುವಂತೆ ಅಧೀನ ನ್ಯಾಯಾಲಯಕ್ಕೆ ನಿರ್ದೇಶಿಸಿ 2017ರ ಮಾ.8ರಂದು ಆದೇಶಿಸಿತ್ತು.
ಪ್ರಕರಣದ ಸಂಬಂಧ ಪೊಲೀಸರು ತನಿಖೆ ಪೂರ್ಣಗೊಳಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ ನಂತರ 2017ರ ಮೇ.21ರಂದು ಅಧೀನ ನ್ಯಾಯಾಲಯ ಅರ್ಜಿದಾರರ ಹಣ ಬಿಡುಗಡೆ ಮಾಡಿತ್ತು. ಆದರೆ ಈ ವೇಳೆಗೆ ಹಳೆಯ ನೋಟುಗಳು ಅಮಾನ್ಯಗೊಂಡಿದ್ದ ಕಾರಣ, ಜುಲೈ 18ರಂದು ಆರ್‌ಬಿಐಗೆ ಪತ್ರ ಬರೆದಿದ್ದ ಕ್ಯಾಂಪ್ಕೊ ಹಳೆಯ ನೋಟುಗಳನ್ನು ಹೊಸ ನೋಟುಗಳಿಗೆ ಬದಲಿಸಿಕೊಡುವಂತೆ ಮನವಿ ಮಾಡಿತ್ತು.
ಆದರೆ ಈ ಮನವಿಯನ್ನು ತಿರಸ್ಕರಿಸಿದ್ದ ಆರ್‌ಬಿಐ, ಹಳೆಯ ನೋಟುಗಳ ವಿನಿಮಯ ಮಾಡಲು 2017ರ ಜೂನ್. 30 ಕೊನೆಯ ದಿನವಾಗಿದ್ದು, ಈಗ ನೋಟುಗಳನ್ನು ಬದಲಿಸಲು ಸಾಧ್ಯವಿಲ್ಲ. ಒಂದೊಮ್ಮೆ ಕಳುವಾದ ನೋಟುಗಳ ಮೇಲಿನ ಸರಣಿ ಸಂಖ್ಯೆಗಳನ್ನು ಪೊಲೀಸರ ಮಹಜರಿನಲ್ಲಿ ಅಥವಾ ನ್ಯಾಯಾಲಯದ ಆದೇಶ ಪ್ರತಿಯಲ್ಲಿ ಉಲ್ಲೇಖಿಸಿದ್ದರೆ ಮಾತ್ರ ವಿನಿಮಯ ಮಾಡಲು ಸಾಧ್ಯವೆಂದು ತಿಳಿಸಿತ್ತು. ಆರ್‌ಬಿಐ ಕ್ರಮ ಪ್ರಶ್ನಿಸಿ ಇದೀಗ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.







