ಪ್ರವಾಸಿಗರಿಗಾಗಿ ಹೋಲಾ ಗೈಡ್ ಆ್ಯಪ್ ಬಿಡುಗಡೆ

ಬೆಂಗಳೂರು, ಸೆ.4: ಪ್ರವಾಸಿಗರಿಗೆ ಕರ್ನಾಟಕದ ಪ್ರವಾಸಿ ತಾಣಗಳಲ್ಲಿ ಸರಕಾರದಿಂದ ಮಾನ್ಯತೆ ಪಡೆದಿರುವ ಪ್ರವಾಸಿ ಗೈಡ್‌ಗಳ ಮಾಹಿತಿ ಪಡೆಯಲು ಅನುಕೂಲವಾಗುವಂತೆ ಮಲ್ಟಿ ಆ್ಯಪ್ಸ್ ಟೆಕ್ನಾಲಜಿ ವತಿಯಿಂದ ‘ಹೋಲಾ ಗೈಡ್ ಆ್ಯಪ್’ ಅನ್ನು ನಟಿ ನೀತು ಬಿಡುಗಡೆಗೊಳಿಸಿದರು.
ಈ ವೇಳೆ ಮಾತನಾಡಿದ ಅವರು, ಯಾವುದೇ ಸಮಸ್ಯೆ ಇಲ್ಲದೆ ಆನಂದಮಯ ಪ್ರವಾಸಕ್ಕಾಗಿ ಹೋಲಾ ಗೈಡ್ ಆ್ಯಪ್ ಸೇವೆ ಪಡೆದುಕೊಳ್ಳಿ. ನಿಮ್ಮದೇ ಆಯ್ಕೆಯ ಗೈಡ್ ಹಾಗೂ ಪ್ರವಾಸಿ ತಾಣ ಆಯ್ಕೆ ಮಾಡಿಕೊಳ್ಳುವ ಮೂಲಕ ಪ್ರವಾಸವನ್ನು ಸುಂದರವಾಗಿಸಿಕೊಳ್ಳಿ. ಈ ನಿಟ್ಟಿನಲ್ಲಿ ಸಂಸ್ಥೆ ಇಂತಹ ಆ್ಯಪ್ ಅಭಿವೃದ್ಧಿ ಪಡಿಸಿರುವುದು ಶ್ಲಾಘನೀಯ ಎಂದು ಹೇಳಿದರು.
ಈ ಆ್ಯಪ್ ಮೂಲಕ ಪ್ರವಾಸಿಗರು ತಮ್ಮದೇ ಆಯ್ಕೆಯ ಪ್ರವಾಸಿ ತಾಣಗಳಲ್ಲಿ ತಾವು ಇಚ್ಛಿಸುವ ಭಾಷೆಯಲ್ಲಿ ಪ್ರವಾಸಿ ಗೈಡ್‌ಗಳ ಸೇವೆಯನ್ನು ಪಡೆಯಬಹುದಾಗಿದೆ. ಇದರಿಂದ ಗೈಡ್‌ಗಳು ಒದಗಿಸುವ ಟೂರ್ ಪ್ಯಾಕೇಜ್, ಸೇವೆಗಳು ಹಾಗೂ ಅವರ ಲಭ್ಯತೆಯ ಸಮಯ ಸೇರಿದಂತೆ ಎಲ್ಲ ವಿವರಗಳನ್ನು ಇರುವಲ್ಲಿಯೇ ಪಡೆಯಬಹುದಾಗಿದೆ. ಅಗತ್ಯತೆಗೆ ಅನುಗುಣವಾಗಿ ಗೈಡ್‌ಗಳ ಸೇವೆಯನ್ನು ಕಾಯ್ದಿರಿಸಬಹುದಾಗಿದೆ. ಹೋಲಾ ಗೈಡ್ ಆ್ಯಪ್ ಮೇಲೆ ಒಮ್ಮೆ ಟ್ಯಾಪ್ ಮಾಡಿ, ಗೂಗಲ್ ಪ್ಲೇ ಸ್ಟೋರ್ ಮತ್ತು ಐಓಎಲ್‌ನಲ್ಲಿ ಡೌನ್ ಲೋಡ್ ಮಾಡಿಕೊಂಡು ಸೇವೆಯ ಲಾಭ ಪಡೆದುಕೊಳ್ಳಬಹುದಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಮುರಳಿಕೃಷ್ಣ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.







