ಕುಮಾರಧಾರಾ ಹೊಳೆಗೆ ಸ್ನಾನಕ್ಕಿಳಿದ ಯುವಕ ನಾಪತ್ತೆ
ಪುತ್ತೂರು, ಸೆ. 4: ಕುದ್ಮಾರು ಸಮೀಪ ಕುಮಾರಧಾರಾ ಹೊಳೆಯಲ್ಲಿ ಸ್ನಾನಕ್ಕೆಂದು ನೀರಿಗೆ ಹಾರಿದ ಯುವಕ ನೀರುಪಾಲಾದ ಘಟನೆ ರವಿವಾರ ಸಂಜೆ ನಡೆದಿದ್ದು, ಸೋಮವಾರ ಸಂಜೆಯ ತನಕ ಪತ್ತೆಯಾಗಿಲ್ಲ.
ಮಂಗಳೂರು ತಾಲೂಕಿನ ಗಂಜಿಮಠ ಕರಿಯ ಎಂಬವರ ಪುತ್ರ ಹರಿಶ್ಚಂದ್ರ (31) ನೀರುಪಾಲಾದ ಯುವಕ. ಕುದ್ಮಾರು ಗ್ರಾಮದ ದರ್ಖಾಸು ಎಂಬಲ್ಲಿ ಚೆನ್ನಪ್ಪ ಗೌಡರಿಗೆ ಸೇರಿದ ಇಂಟರ್‌ಲಾಕ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಹರಿಶ್ಚಂದ್ರ ರವಿವಾರ ಸಂಜೆ ವೇಳೆ ಫ್ಯಾಕ್ಟರಿಯಲ್ಲಿದ್ದ ಯುವಕರ ಜೊತೆ ಸ್ನಾನಕ್ಕೆಂದು ನದಿಗೆ ಹಾರಿ ಬಳಿಕ ಸುಳಿಯಲ್ಲಿ ಸಿಕ್ಕಿ ಕಣ್ಮರೆಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಶೋಧ ಕಾರ್ಯ ಮುಂದುವರಿಕೆ
ರವಿವಾರ ರಾತ್ರಿ ಬೆಳ್ಳಾರೆ ಠಾಣಾ ಪೊಲೀಸ್ ತಂಡ ಹಾಗೂ ಅಗ್ನಿಶಾಮಕ ದಳದವರು ಘಟನಾ ಸ್ಥಳಕ್ಕೆ ತೆರಳಿ ಶೋಧ ಕಾರ್ಯ ನಡೆಸಿದರು. ರಾತ್ರಿ ಕಾರ್ಯಾಚರಣೆ ಮಾಡುವುದು ಕಷ್ಟವೆಂದು ತಿಳಿದು ಕಾರ್ಯಾಚರಣೆ ನಿಲ್ಲಿಸಿ, ಸೋಮವಾರ ಬೆಳಗ್ಗೆಯಿಂದ ಮುಂದುವರಿಸಿದ್ದರು. ಸ್ಥಳೀಯ ಈಜು ತಜ್ಞರೊಂದಿಗೆ ಉಪ್ಪಿನಂಗಡಿ ಮುಳುಗು ತಜ್ಞ ಮಹಮ್ಮದ್ ಬಂದಾರ್ ಮತ್ತಿತರರು ಶೋಧ ಕಾರ್ಯ ನಡೆಸಿದ್ದರು. ಬಳಿಕ ತಣ್ಣೀರುಬಾವಿ ಮುಳುಗು ತಜ್ಞರ ತಂಡ ಆಗಮಿಸಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಬೆಳ್ಳಾರೆ ಠಾಣಾ ಎಸ್‌ಐ ಎಂ.ವಿ. ಚೆಲುವಯ್ಯ, ಸಿಬ್ಬಂದಿ ವರ್ಗ, ಅಗ್ನಿ ಶಾಮಕ ದಳದವರೂ ಸಾಥ್ ನೀಡಿದರು. ಆದರೆ ಯಾವುದೇ ಸುಳಿವು ಸಿಗಲಿಲ್ಲ. ಘಟನಾ ಸ್ಥಳಕ್ಕೆ ಕಡಬ ತಹಶೀಲ್ದಾರ್ ಜಾನ್ ಪ್ರಕಾಶ್, ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ ತೆರಳಿದ್ದಾರೆ.







