ಬ್ಲೂವೇಲ್ ಚಾಲೆಂಜ್ ನಿಷೇಧಕ್ಕೆ ಸಾಧ್ಯತೆ ಶೋಧಿಸಿ: ಹೈಕೋರ್ಟ್

ಮದುರೈ, ಸೆ. 4: ಆನ್‌ಲೈನ್ ಅಪಾಯಕಾರಿ ಆಟ ಬ್ಲೂವೇಲ್ ಚಾಲೆಂಜ್ ಅನ್ನು ನಿಷೇಧಿಸಲು ಸಾಧ್ಯತೆ ಶೋಧಿಸುವಂತೆ ಮದ್ರಾಸ್ ಉಚ್ಚ ನ್ಯಾಯಾಲಯ ಕೇಂದ್ರ ಹಾಗೂ ತಮಿಳುನಾಡು ಸರಕಾರಕ್ಕೆ ನಿರ್ದೇಶಿಸಿದೆ.
ಈ ವಿಷಯದ ಕುರಿತು ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೊಂಡಿರುವ ಮದುರೈ ಪೀಠದ ನ್ಯಾಯಮೂರ್ತಿಗಳಾದ ಕೆ.ಕೆ. ಶಶಿಧರನ್ ಹಾಗೂ ಜಿ.ಆರ್. ಸ್ವಾಮಿನಾಥನ್, ಕೇಂದ್ರ ಮಾಹಿತಿ ಹಾಗೂ ಪ್ರಸಾರ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ ಹಾಗೂ ಐಟಿ ವಿಭಾಗಕ್ಕೆ ನೋಟಿಸು ಜಾರಿ ಮಾಡಿದ್ದಾರೆ.
ಆಟ ನಿಷೇಧಿಸಲು ಸಾಧ್ಯತೆ ಶೋಧಿಸುವಂತೆ ಅವರಲ್ಲಿ ತಿಳಿಸಿದೆ. ಹಾಗೂ ಇಂತಹ ಆನ್‌ಲೈನ್ ಆಟಗಳನ್ನು ನಿಷೇಧಿಸಲು ನೀಡಲಾದ ಸಲಹೆಗಳನ್ನು ಅಳವಡಿಸಿಕೊಳ್ಳುವಂತೆ ಮದ್ರಾಸ್ ಐಐಟಿ ನಿರ್ದೇಶಕರಿಗೆ ನಿರ್ದೇಶಿಸಿದೆ.
ಇಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಾಲಕ ಈ ಆಟವನ್ನು ಇತರ 75 ಮಂದಿಗೆ ಹಂಚಿದ್ದಾನೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು. ಆದಾಗ್ಯೂ, ಎಲ್ಲೂ ಈ ಆಟ ಆಡದಿರುವಂತೆ ತಡೆಯಲಾಗಿದೆ ಎಂದು ಸರಕಾರದ ಪರ ವಕೀಲರು ಹೇಳಿದರು.
ಈ ಅಪಾಯಕಾರಿ ಆನ್‌ಲೈನ್ ಆಟವನ್ನು ಹಂಚುವವರಿಗೆ ಕಠಿಣ ಎಚ್ಚರಿಕೆ ನೀಡಬೇಕು ಎಂದು ನ್ಯಾಯಮೂರ್ತಿಗಳು ರಾಜ್ಯ ಡಿಜಿಪಿ ಹಾಗೂ ಗೃಹ ಕಾರ್ಯದರ್ಶಿಗೆ ಸಲಹೆ ನೀಡಿದರು.
ಬ್ಲೂವೇಲ್ ಚಾಲೆಂಜ್‌ನಂತಹ ಆಟಗಳನ್ನು ನಿಷೇಧಿಸಲು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕು ಎಂದು ನ್ಯಾಯವಾದಿ ಕೃಷ್ಣಮೂರ್ತಿ ಅವರು ಮನವಿ ಸಲ್ಲಿಸಿರುವುದರಿಂದ ಈ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುವುದು ಎಂದು ಸೆಪ್ಟಂಬರ್ 1ರಂದು ನ್ಯಾಯಾಲಯ ಹೇಳಿತ್ತು.







