ಗುಂಡ್ಲುಪೇಟೆ : ಭಾರೀ ಮಳೆ - ಜನ ಜೀವನ ಅಸ್ತವ್ಯಸ್ಥ

ಗುಂಡ್ಲುಪೇಟೆ,ಸೆ.4: ಪಟ್ಟಣದ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಭಾರೀ ಮಳೆಯಾಗಿದೆ. ಭಾನುವಾರ ಸಂಜೆಯಾಗುತ್ತಲೇ ಸುಮಾರು ಎರಡು ಗಂಟೆಗಳ ನಿರಂತರವಾಗಿ ಸುರಿದ ಮಳೆಗೆ ಇಲ್ಲಿನ ಜನ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ಥಗೊಂಡಿದೆ.
ಈ ನಡುವೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ಸಾರಿಕೆ ಬಸ್ ನಿಲ್ದಾಣಕ್ಕೆ ಬಾರಿ ಪ್ರಮಾಣದ ನೀರು ನುಗ್ಗಿದ್ದು ಇಡೀ ಬಸ್ ನಿಲ್ದಾಣ ಕೆರೆಯಂತೆ ಬಾಸವಾಗುತ್ತಿತ್ತು. ಇದರಿಂದಾಗಿ ಪ್ರಯಾಣಿಕರು ತೊಂದರೆಗೆ ಸಿಲುಕುವಂತೆ ಮಾಡಿತ್ತು. ಬಸ್ ನಿಲ್ದಾಣದ ಹೊರ ಭಾಗದಲ್ಲಿ ಪ್ರಯಾಣಿಕರನ್ನು ಕರೆದು ಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಈ ಮಳೆಗೆ ಪಟ್ಟಣದ ಪ್ರವಾಸಿ ಮಂದಿರ, ಊಟಿ ರಸ್ತೆ ಹಾಗೂ ಮಡಹಳ್ಳಿ ವೃತ್ತ, ಹಳ್ಳದಕೇರಿ ಸೇರಿದಂತೆ ವಿವಿಧ ಭಾಗದಲ್ಲಿ ಬಾರೀ ಪ್ರಮಾಣದಲ್ಲಿ ಕೊಳಚೆ ನೀರು ಮಡುಗಟ್ಟಿ ನಿಂತಿದ್ದು ಸಂಚಾರಕ್ಕೆ ತೀವ್ರ ತೊಂದರೆಯುಂಟುಮಾಡಿತು. ಹಲವು ಭಾಗಗಳಲ್ಲಿ ಅಗ್ನಿಶಾಮಕದಳದ ಸಿಬ್ಬಂದಿಗಳು ಮಳೆ ನೀರು ಸರಾಗವಾಗಿ ಹರಿಯುವಂತೆ ಮಾಡುವುದರೊಂದಿಗೆ ಮಳೆಯಿಂದ ಸಣ್ಣ ಪುಟ್ಟದಾಗಿ ಹಾನಿಗೊಳಗಾದ ಮನೆಗಳವರಿಗೆ ಸಹಾಯ ಹಸ್ತ ನೀಡಿದ್ದರು.
ಮಡಹಳ್ಳಿ ವೃತ್ತದ ಬಳಿಯಲ್ಲಿ ಮಳೆ ನೀರು ಹರಿದುಹೋಗಲು ಇದ್ದ ಮಾರ್ಗವನ್ನು ಮುಚ್ಚಿದ್ದರಿಂದ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣ, ದೊಡ್ಡಹುಂಡಿ ಭೋಗಪ್ಪ ಕಿರಿಯ ಕಾಲೇಜು ಮಾರ್ಗವು ಜಲಾವೃತವಾಗಿದ್ದು ವಾಹನ ಹಾಗೂ ಪಾದಚಾರಿಗಳ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು.
ಒಂದೆಡೆ ಮಳೆಯ ರಗಳೆ ಹೆಚ್ಚಿದ್ದರೆ, ಬಂಡೀಪುರ ಅಭಯಾರಣ್ಯದಲ್ಲಿ ಕಳೆದ ತಿಂಗಳಿನಿಂದ ಮಳೆಯಾಗದೇ ತತ್ತರಿಸಿ ಹೋಗಿದ್ದ ವನ್ಯ ಜೀವಿಗಳಿಗೆ ಮತ್ತು ಬಿಸಿಲಿನ ಬೇಗೆಯಲ್ಲಿ ಬೇಯುತ್ತಿದ್ದ ಜನತೆಗೆ ವರುಣ ತಂಪಿನ ವಾತಾವರಣ ನೀಡಿದ್ದು ನಿಜ.







