ಮಡಿಕೇರಿ : ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ

ಮಡಿಕೇರಿ,ಸೆ.4 :ಪತ್ನಿಯನ್ನು ಹತ್ಯೆಗೈದ ಆರೋಪ ಸಾಕ್ಷ್ಯಾಧಾರಗಳಿಂದ ದೃಢಪಟ್ಟಿದ್ದು, ಆರೋಪಿಗೆ ನಗರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ದಂಡ ಸಹಿತ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಮಕ್ಕಂದೂರು ಗ್ರಾಮದ ಉದಯಗಿರಿಯ ನಿವಾಸಿ ಕೆ.ಸಂತೋಷ್ ಎಂಬಾತನೇ ದಂಡ ಸಹಿತ ಶಿಕ್ಷೆಗೆ ಗುರಿಯಾದ ಅಪರಾಧಿಯಾಗಿದ್ದಾನೆ.
ಬಿಳಿಗೇರಿ ಗ್ರಾಮದ ಆನಂದ್ ಎಂಬವರ ಮಗಳು ಗೀತಾ ಎಂಬಾಕೆಯನ್ನು 2011 ರಲ್ಲಿ ವಿವಾಹವಾಗಿದ್ದ ಸಂತೋಷ್ ಪತ್ನಿಯೊಂದಿಗೆ ಆಗಾಗ್ಗ ಜಗಳ ತೆಗೆದು ಹಲ್ಲೆ ಮಾಡುತ್ತಿದ್ದನು. 2014ರ ನವೆಂಬರ್ 28 ರಂದು ಮಡಿಕೇರಿ ಸಂತೆಗೆ ಬಂದಿದ್ದ ದಂಪತಿ ಸಂಜೆ ವಾಪಸ್ಸು ಹೋಗುವಾಗ ಮಾರ್ಗಮಧ್ಯೆ ಮತ್ತೆ ಜಗಳ ತೆಗೆದು ಕತ್ತಿಯಿಂದ ಹಲ್ಲೆ ನಡೆಸಿದ್ದನು.
ತೀವ್ರವಾಗಿ ಗಾಯಗೊಂಡಿದ್ದ ಗೀತಾ ಕೊನೆಯುಸಿರೆಳೆದಿದ್ದಳು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶ ಆರ್.ಕೆ.ಜಿ.ಎಂ. ಮಹಾಸ್ವಾಮೀಜಿ ಅವರು ಕೊಲೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ 10 ಸಾವಿರ ರೂ. ದಂಡ ಮತ್ತು ಜೀವಾವಧಿ ಶಿಕ್ಷೆಯನ್ನು ವಿಧಿಸಿ ತೀರ್ಪಿ ನೀಡಿದ್ದಾರೆ.







