ಶ್ರೀ ಭಗವತಿ ದೇವಾಲಯ ಪ್ರಕರಣ : ನಾಪೋಕ್ಲುವಿನಲ್ಲಿ ಪ್ರತಿಭಟನೆ

ಮಡಿಕೇರಿ, ಸೆ.4 :ಕಕ್ಕಬ್ಬೆಯ ನೆಟ್ಟುಮಾಡು ಶ್ರೀ ಭಗವತಿ ದೇವಾಲಯದ ಸ್ವಾಗತ ಕಮಾನಿಗೆ ದನದ ಕಾಲುಗಳನ್ನು ಕಟ್ಟಿದ ಘಟನೆಯನ್ನು ಖಂಡಿಸಿ ಕೊಡಗು ಜಿಲ್ಲಾ ಬಿಜೆಪಿ ಮತ್ತು ಹಿಂದೂ ಪರ ಸಂಘಟನೆಗಳಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು. ಸೆ.11 ರ ಒಳಗೆ ಆರೋಪಿಗಳನ್ನು ಬಂಧಿಸದಿದ್ದಲ್ಲಿ ಜಿಲ್ಲೆಯಾದ್ಯಂತ ಪ್ರತಿಭಟನೆಯನ್ನು ತೀವ್ರಗೊಳಿಸುವ ಎಚ್ಚರಿಕೆಯನ್ನು ಪ್ರತಿಭಟನಾಕಾರರು ನೀಡಿದರು.
ಶಾಸಕ ಕೆ.ಜಿ. ಬೋಪಯ್ಯ, ಎಂಎಲ್‍ಸಿ ಸುನಿಲ್ ಸುಬ್ರಮಣಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಪ್ಪಚಟ್ಟೊಳಂಡ ಮನು ಮುತ್ತಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು. ನಾಡ ಕಚೇರಿಯ ಕಂದಾಯ ಪರಿವೀಕ್ಷಕ ಪಿ.ಡಿ.ರಾಮಯ್ಯನವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ, ಆರೋಪಿಗಳ ಬಂಧನಕ್ಕೆ ಆಗ್ರಹಿಸಲಾಯಿತು.
ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಹಿಂದೂಗಳ ಶ್ರದ್ಧಾ ಕೇಂದ್ರಗಳನ್ನು ಅಪವಿತ್ರಗೊಳಿಸಿದ ಇಂತಹ ಘಟನೆಗಳು ಮರುಕಳಿಸಿದಲ್ಲಿ ಹಿಂದೂ ಸಮಾಜ ಇದನ್ನು ಸಹಿಸಿಕೊಳ್ಳುವುದಿಲ್ಲ ಎಂದರು.
ಎಂಎಲ್‍ಸಿ ಸುನಿಲ್ ಸುಬ್ರಮಣಿ ಮಾತನಾಡಿ, ರಾಜ್ಯ ಸರಕಾರ ಅಲ್ಪ ಸಂಖ್ಯಾತರ ಬಗ್ಗೆ ಹೆಚ್ಚಿನ ಒಲವು ತೋರಿ ಹಿಂದೂಗಳ ದಮನಕ್ಕೆ ಕೈಜೋಡಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದರು.
ರಾಜ್ಯ ಬಿ.ಜೆ.ಪಿ. ಪ್ರಧಾನ ಕಾರ್ಯದರ್ಶಿ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಮಾತನಾಡಿ, ಕಕ್ಕಬ್ಬೆಯ ಘಟನೆ ಒಂದು ಹೀನ ಕೃತ್ಯ. ಇದನ್ನು ಜಿಲ್ಲೆಯ ಜನತೆ ಒಕ್ಕೊರಲಿನಿಂದ ಖಂಡಿಸಬೇಕು ಮತ್ತು ಹಿಂದೂಗಳು ಜಾಗೃತರಾಗಬೇಕೆಂದರು.
ಬಿ.ಜೆ.ಪಿ. ಜಿಲ್ಲಾಧ್ಯಕ್ಷ ಭಾರತೀಶ್ ಮಾತನಾಡಿ, ಹಿಂದೂಗಳು ಇತರ ಎಲ್ಲಾ ಜನಾಂಗದೊಂದಿಗೆ ಸಹೋದರತೆಯಿಂದ ಬಾಳ್ವೆ ನಡೆಸುತ್ತಿರುವ ಸಂದರ್ಭ ಇಂತಹ ಕೃತ್ಯವನ್ನು ಎಸಗಿರುವುದು ಖಂಡನೀಯ. ಪೊಲೀಸರು ಆರೋಪಿಗಳನ್ನು ಬಂಧಿಸಿ ಜಿಲ್ಲೆಯಲ್ಲಿ ಶಾಂತಿ ನೆಲೆಸಲು ಕ್ರಮ ಕೈಗೊಳ್ಳಬೇಕೆಂದರು. ಜಿಪಂ ಸದಸ್ಯ ಮುರುಳೀಧರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರತಿಭಟನೆಯಲ್ಲಿ ಜಿ.ಪಂ ಅಧ್ಯಕ್ಷ ಬಿ.ಎ. ಹರೀಶ್, ಮಾಜಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ಬಲ್ಲಾರಂಡ ಮಣಿ ಉತ್ತಪ್ಪ, ಬೊಳಿಯಾಡಿರ ಸಂತು ಸುಬ್ರಮಣಿ, ತಳೂರ್ ಕಿಶೋರ್ ಕುಮಾರ್, ಆರ್‍ಎಸ್‍ಎಸ್, ಬಜರಂಗದಳ, ವಿಹಿಂಪ ಕಾರ್ಯಕರ್ತರು ಭಾಗವಹಿದ್ದರು.







