ಮಂಗಳೂರು ಚಲೋ: ಬೈಕ್ ರ್ಯಾಲಿಗೆ ಸಿದ್ಧವಾಗಿದ್ದ ಬಿಜೆಪಿ ಕಾರ್ಯಕರ್ತರ ಬಂಧನ

ಶಿಡ್ಲಘಟ್ಟ, ಸೆ.5: ಕರ್ನಾಟಕ ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿರುವ ಮಂಗಳೂರು ಚಲೋ ರ್ಯಾಲಿಗೆ ಸಿದ್ಧವಾಗಿದ್ದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಚಿಂತಾಮಣಿ ರಸ್ತೆಯಲ್ಲಿರುವ ಬಿಜೆಪಿ ಕಚೇರಿಯ ಆವರಣದಲ್ಲಿ ಬೈಕ್ ರ್ಯಾಲಿಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಬಿಜೆಪಿ ಮುಖಂಡರನ್ನು ಪೊಲೀಸರು ಬಂಧಿಸಿದರು.
ಈ ವೇಳೆ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕೆ.ಆರ್.ಸುರೇಂದ್ರಗೌಡ ಮಾತನಾಡಿ, ಸಂಘಟಕರನ್ನು ಯಾವುದೇ ಕಾರಣವಿಲ್ಲದೇ ವಿನಾಕಾರಣ ಕೊಲೆ ಮಾಡುತ್ತಿರುವ ಎಸ್ ಡಿಪಿಐ ಕೆಎಫ್ ಡಿ, ಪಿಎಪ್‍ಐಗಳಂತಹ ಸಂಘಟನೆಗಳನ್ನು ದೇಶದಿಂದ ಹೊರಗಟ್ಟಬೇಕು. ಹಾಗು ಇವುಗಳಿಗೆ ಕುಮ್ಮಕ್ಕು ನೀಡಿತ್ತಿರುವ ರಾಜ್ಯ ಸರ್ಕಾರದ ಹಲವು ಸಚಿವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಲು ಮಂಗಳೂರಿನಲ್ಲಿ ನಡೆಯಲಿರುವ ಹೋರಾಟಕ್ಕೆ ತಾಲೂಕಿನಿಂದ 100 ಕ್ಕೂ ಹೆಚ್ಚಿನ ಬೈಕ್‍ಗಳಲ್ಲಿ ತೆರಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದ ಸಂಧರ್ಭದಲ್ಲಿ ಪೊಲೀಸರು ನಮ್ಮನ್ನು ಬಂಧಿಸಿದ್ದಾರೆ. ಇದು ಖಂಡನೀಯ, ರಾಜ್ಯ ಸರ್ಕಾರ ಹೋರಾಟಗಳನ್ನು ಹತ್ತಿಕ್ಕುವಂತಹ ಪ್ರಯತ್ನ ಮಾಡುತ್ತಿದೆ. ತನಗಿರುವ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಹೋರಾಟ ಮಾಡುವುದು ಪ್ರತಿಯೊಬ್ಬ ನಾಗರಿಕರ ಹಕ್ಕು, ಅದನ್ನು ಮೊಟಕುಗೊಳಿಸುವ ಹುನ್ನಾರಗಳು ನಡೆಯುತ್ತಿವೆ ಎಂದು ಅವರು ಆರೋಪಿಸಿಸರು.
ಬಿಜೆಪಿ ತಾಲೂಕು ಅಧ್ಯಕ್ಷ ಬಿ.ಸಿ.ನಂದೀಶ್ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಜನವಿರೋಧಿ ನಿಲುವು ತಾಳಿರುವುದರ ಜತೆಗೆ ಹೋರಾಟದ ಮೂಲಕ ಉತ್ತಮ ಸಮಾಜ ನಿರ್ಮಾಣದಲ್ಲಿ ತೊಡಗುವವರನ್ನು ಕೊಲೆ ಮಾಡುತ್ತಿರುವವರ ಮೇಲೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುವಂತೆ ಕೊಟ್ಟಿರುವ ದೂರುಗಳನ್ನು ಸ್ಥಳೀಯವಾಗಿ ವಿಚಾರಣೆಗೆ ಒಳಪಡಿಸುವ ಮೂಲಕ ಪ್ರಕರಣಗಳನ್ನು ಮುಚ್ಚಿ ಹಾಕುತ್ತಿದ್ದಾರೆ ಎಂದರು.
ಬಿಜೆಪಿ ಮುಖಂಡರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಬಿಜೆಪಿ ಯುವಮೋರ್ಚಾ ತಾಲೂಕು ಅಧ್ಯಕ್ಷ ಬೈರಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಪ್ರತಾಪ್, ಮಂಜುನಾಥ್, ಜಿಲ್ಲಾ ಕಾರ್ಯದರ್ಶಿ ಸುರೇಂದ್ರಗೌಡ, ಬಿ.ಸಿ.ನಂದೀಶ್, ನರೇಶ್, ವಿಸ್ತಾರಕ್ ಸಂದೀಪ್, ಶ್ರೀರಾಮ್, ರವಿಚಂದ್ರ ಸೇರಿದಂತೆ ಇನ್ನಿತರರನ್ನು ಬಂಧಿಸಲಾಯಿತು.







