ಪೊಲೀಸರ ದುಸ್ಥಿತಿ ಹೇಳಿಕೊಂಡು ಬಾವುಕರಾದ ಮಾಜಿ ಡಿವೈಎಸ್ಪಿ

ಉಡುಪಿ, ಸೆ.5: ಮುಖ್ಯಮಂತ್ರಿ ವಾಚ್ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸುವಂತೆ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ, ಉಡುಪಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಸಿಐಡಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಪೊಲೀಸರ ದುಸ್ಥಿತಿ ಬಗ್ಗೆ ಹೇಳಿಕೊಂಡು ಬಾವುಕರಾದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ವಾಚ್ ಪ್ರಕರಣದ ಹಿಂದಿರುವ ಭ್ರಷ್ಟಾ ಚಾರದ ಬಗ್ಗೆ ಸಿಬಿಐ ತನಿಖೆ ಮಾಡದಿದ್ದರೆ, ನಾವು ಕೋರ್ಟ್‌ಗೆ ಹೋಗಿ ಸಿಬಿಐ ತನಿಖೆಗೆ ಒಪ್ಪಿಸುವಂತೆ ಮಾಡುತ್ತೇವೆ. ಆದರೆ ಪೊಲೀಸ್ ಇಲಾಖೆ, ಗೃಹ ಇಲಾಖೆ ಯಾಕೆ ಇರೋದು. ಸಿಬಿಐ ಇರೋದು ಗೃಹ ಇಲಾಖೆಯ ಅಧೀನ ದಲ್ಲಿ. ಇವರು ಯಾಕೆ ಮಾಡುವುದಿಲ್ಲ. ಇವರನ್ನು ನಾವು ಬಡಿದು ಎಬ್ಬಿಸಬೇಕೇ. ಈಗ ನಾನು ಅದೇ ಕೆಲಸ ಮಾಡುತ್ತಿದ್ದೇನೆ’ ಎಂದು ಅವರು ಆಕ್ರೋಶ ವ್ಯಕ್ತ ಪಡಿಸಿದರು.
‘ಸಿಐಡಿ ಕತೆ ಎಲ್ಲರಿಗೂ ಗೊತ್ತಿದೆ. ಡಿವೈಎಸ್ಪಿ ಗಣಪತಿ ಕತೆ ಏನಾಯಿತು ಅಂತ ತಿಳಿದಿದೆ. ಕಲ್ಲಪ್ಪ ಹಂಡಿಭಾಗ್ ಪ್ರಕರಣದಲ್ಲಿ ಇನ್ನೂ ಆರೋಪಪಟ್ಟಿ ಸಲ್ಲಿಸಿಲ್ಲ. ಅದರಲ್ಲಿ ಇರುವುದು ಬಿಜೆಪಿ ಎಂಎಲ್‌ಎ ಹೆಸರು. ಆದರೂ ಇವರಿಗೆ ಜಾರ್ಜ್‌ಶೀಟ್ ಹಾಕಲು ಏನಾಗಿದೆ. ಗಣಪತಿ ಪ್ರಕರಣದಲ್ಲಿ ಎಫ್‌ಎಸ್‌ಎಲ್ ವರದಿ ಬಂದಿದ್ದರೂ ಅದನ್ನು ತನಿಖೆ ಮಾಡದೆ ಕ್ಲೀನ್‌ಚೀಟ್ ಕೊಟ್ಟಿದ್ದಾರೆ. ಸಿಐಡಿಯವರಿಗೆ ನಾಚಿಕೆ ಆಗುವುದಿಲ್ಲವೇ. ನೇಣು ಹಾಕಿಕೊಂಡು ಸತ್ತಿರುವುದು ಅವರ ಬಂಧುಗಳು’ ಎಂದು ಅವರು ಕಿಡಿಕಾರಿದರು.
‘ಈಗ ಪೊಲೀಸರದ್ದು ನಾಯಿಪಾಡು ಆಗಿದೆ. ಇಂದು ಅವರದ್ದು ಬೈಕ್ ರ್ಯಾಲಿಯಂತೆ. ಅದನ್ನು ಪೊಲೀಸರು ಕತ್ತೆಗಳಂತೆ ರಸ್ತೆ ಮೇಲೆ ನಿಂತು ಕಾಯ ಬೇಕು. ಪೊಲೀಸರಂದರೆ ಏನು ಅಂತ ತಿಳಿದುಕೊಂಡಿದ್ದೀರಿ’ ಎಂದು ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಬಾವುಕರಾಗಿ ಪತ್ರಿಕಾಗೋಷ್ಠಿಯಲ್ಲಿ ಕೊನೆಗೊಳಿಸಿ ಹೊರ ನಡೆದರು.







