ಸೆ.8 ರಿಂದ ಹೋಮಿಯೋಪತಿಕ್ ಸಮ್ಮೇಳನ
ಬೆಂಗಳೂರು, ಸೆ.5: ಕರ್ನಾಟಕ ಹೋಮಿಯೋಪತಿ ವೈದ್ಯರ ಸಂಘದ ರಜತ ಮಹೋತ್ಸವದ ಅಂಗವಾಗಿ ಸೆ.8 ರಿಂದ 10 ರವರೆಗೆ ನಗರದ ನಿಮ್ಹಾನ್ಸ್ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಹೋಮಿಯೋಪತಿಕ್ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಡಾ.ಬಿ.ಆರ್.ಶ್ರೀನಿವಾಸ್ ತಿಳಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೋಗಗಳ ನಿದರ್ಶನ ಪೂರ್ವಕ ನಿರೂಪಣೆ ಮತ್ತು ಅದಕ್ಕೆ ಚಿಕಿತ್ಸೆ ನೀಡಿ ಗುಣಪಡಿಸಿದ ಹೋಮಿಯೋಪತಿಯ ವೈಜ್ಞಾನಿಕ ಪುರಾವೆಯನ್ನು ಸಾದರಪಡಿಸುವುದು ಸಮ್ಮೇಳನದ ಉದ್ದೇಶವಾಗಿದೆ ಎಂದು ಹೇಳಿದರು.
ಸಮ್ಮೇಳನಕ್ಕೆ ಭಾರತ ಮತ್ತು ವಿವಿಧ ದೇಶಗಳಿಂದ ಭಾಷಣಕಾರರನ್ನು ಆಹ್ವಾನಿಸಲಾಗಿದೆ. ಈ ವೇಳೆ ಭಾರತದ ಕಾಶ್ಮೀರದಿಂದ ಕೇರಳದವರೆಗೆ, ಗುಜರಾತಿನಿಂದ ಮಣಿಪುರದ ವರೆಗಿನ ಎಲ್ಲಾ ರಾಜ್ಯಗಳ ಹೆಸರಾಂತ ಹೋಮಿಯೊಪತಿ ವೈದ್ಯರುಗಳು ದೇಶ-ವಿದೇಶದ ವೈದ್ಯರು ಮತ್ತು ವಿಜ್ಞಾನಿಗಳು ತಮ್ಮ ಲೇಖನವನ್ನು ಮಂಡಿಸಲಿದ್ದಾರೆ ಎಂದರು.
ಸಮ್ಮೇಳನದ ಮೊದಲ ದಿನದ ವೈಜ್ಞಾನಿಕ ಅಧಿವೇಶನವನ್ನು ಹೋಮಿಯೋಪತಿ ಸಂಶೋಧನಾ ಕೇಂದ್ರದ ಕೌನ್ಸಿಲ್ ಮಹಾ ನಿರ್ದೇಶಕ ಡಾ. ಆರ್.ಕೆ.ಮನ್‌ಚಂದ್ ಉದ್ಘಾಟಿಸಲಿದ್ದಾರೆ. ಎರಡನೇ ದಿನದಂದು ಕೇಂದ್ರದ ಆಯುಷ್ ಸಚಿವ ಶ್ರೀಪಾದ್ ಯೆಸ್ಸೋ ನಾಯ್ಕೋ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಮಂಗಳೂರು ಫಾದರ್ ಮುಲ್ಲರ್ಸ್ ಹೋಮಿಯೊಪತಿ ಕಾಲೇಜಿನ ಪ್ರಾಂಶುಪಾಲ ಡಾ. ಶಿವಪ್ರಸಾದ್‌ಗೆ ಅತ್ಯುತ್ತಮ ಹೋಮಿಯೋಪತಿ ವೈದ್ಯರಿಗೆ ನೀಡುವ ‘ಹೋಮಿಯೊ ಆಚಾರ್ಯ ಪ್ರಶಸ್ತಿ’ ಹಾಗೂ ಜನ ಸೇವೆ ಮಾಡುತ್ತಿರುವ ಹೋಮಿಯೋಪತಿ ಅತ್ಯುತ್ತಮ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.







