ಕರಕುಶಲ ಉತ್ಪನ್ನಗಳ ಮೇಲಿನ ಜಿಎಸ್‌ಟಿ ಹಿಂಪಡೆಯುವಂತೆ ಆಗ್ರಹ
ಸೆ.7 ರಿಂದ ಕರ ನಿರಾಕರಣೆ ಸತ್ಯಾಗ್ರಹ
ಬೆಂಗಳೂರು, ಸೆ.5: ಗ್ರಾಮ ಸೇವಾ ಸಂಘದ ವತಿಯಿಂದ ಕರಕುಶಲ ಉತ್ಪನ್ನಗಳ ಮೇಲಿನ ಜಿಎಸ್‌ಟಿ ಕೈ ಬಿಡುವಂತೆ ಆಗ್ರಹಿಸಿ ಸೆ.7ರಿಂದ ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಲ್ಲಿ ಕರ ನಿರಾಕರಣೆ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಸಂಚಾಲಕ ಅಭಿಲಾಷ್ ಹೇಳಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ. 7ರಂದು ನಗರದ ಟೌನ್‌ಹಾಲ್ ಎದುರು ಗಾಯಕಿ ಎಂ.ಡಿ.ಪಲ್ಲವಿ ಕರಕುಶಲ ಉತ್ಪಾದಕರ ವಚನಕಾರರ ಗೀತ ಗಾಯನದ ಮೂಲಕ ಕರ ನಿರಾಕರಣೆ ಸತ್ಯಾಗ್ರಹಕ್ಕೆ ಚಾಲನೆ ನೀಡಲಿದ್ದಾರೆ. ಈ ವೇಳೆ ಚಿತ್ರ ನಿರ್ದೇಶಕ ಎಂ.ಎಸ್.ಸತ್ಯು, ಹಿರಿಯ ಸ್ವಾತಂತ್ರ ಹೋರಾಟಗಾರ ದೊರೆಸ್ವಾಮಿ, ಮಾಜಿ ಪೊಲೀಸ್ ಮಹಾನಿರ್ದೇಶಕ ಅಜಯ್‌ಕುಮಾರ್ ಸಿಂಗ್ ಸೇರಿದಂತೆ ಸಾಹಿತಿಗಳು, ಕಲಾವಿದರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಎಲ್ಲಾ ಕರಕುಶಲ ಉತ್ಪನ್ನಗಳ ಮೇಲೆ ಜಿಎಸ್‌ಟಿ ವಿಧಿಸಲಾಗಿದೆ. ಸ್ವಾತಂತ್ರ ನಂತರ ಇದೇ ಮೊದಲ ಬಾರಿಗೆ ಖಾದಿ ಕೈಮಗ್ಗ ಹಾಗೂ ಕರಕುಶಲ ವಸ್ತುಗಳ ಮೇಲೆ ತೆರಿಗೆ ವಿಧಿಸಲಾಗಿದೆ. ಈಗಾಗಲೇ ಸಂಕಷ್ಟಕ್ಕೆ ಸಿಲುಕಿರುವ ಗ್ರಾಮೀಣ ಉತ್ಪಾದನಾ ಕ್ಷೇತ್ರ ಹೊಸ ತೆರಿಗೆಯಿಂದಾಗಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ಜಿಎಸ್‌ಟಿ ವ್ಯವಸ್ಥೆಯಿಂದ ವೈಭವೋಪೇತ ವಸ್ತುಗಳ ಬೆಳೆ ಇಳಿಕೆಯಾಗಿಲ್ಲ. ಕರಕುಶಲ ಉತ್ಪನ್ನಗಳ ಬೆಲೆ ಏರಿಕೆಯಾಗಿದೆ. ಯಂತ್ರದ ಉತ್ಪನ್ನಗಳಿಗೆ ಹೊಲಿಸಿದರೆ ಕರಕುಶಲ ಉತ್ಪನ್ನಗಳ ಬೆಲೆ ದುಬಾರಿಯಾಗಿದೆ. ಪರಿಸರ ಸ್ನೇಹಿ ಉದ್ದಿಮೆಯಾಗಿರುವ ಕರಕುಶಲ ಉತ್ಪನ್ನಗಳ ಮೇಲಿನ ಜಿಎಸ್‌ಟಿ ತೆರಿಗೆ ಸರಿಯಾದ ಕ್ರಮವಲ್ಲ ಎಂದು ತಿಳಿಸಿದರು.
ಕರಕುಶಲ ಉತ್ಪನ್ನಗಳ ಪರವಾದ ಹೋರಾಟ ಗ್ರಾಹಕರ ಪ್ರಾಯಶ್ಚಿತ್ತದ ಹೋರಾಟವಾಗಿದೆ. ಕರವನ್ನು ಕೊಡುವುದು ಇಲ್ಲ, ಪಡೆಯುವುದು ಇಲ್ಲ ಎನ್ನುವ ಘೋಷಣೆಯೊಂದಿಗೆ ಕರಕುಶಲ ಉತ್ಪನ್ನಗಳನ್ನು ಬಹಿರಂಗವಾಗಿ ಮಾರಾಟ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಕಾನೂನು ಶಿಕ್ಷೆ ಎದುರಿಸಲು ನಾವು ಸಿದ್ಧರಿದ್ದೇವೆ ಎಂದ ಅವರು, ಕರಕುಶಲ ಉತ್ಪನ್ನ ಕರ ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರಕಾರ ವಿಧಿಸಿರುವ ತೆರಿಗೆ ಹಿಂಪಡೆಯುವಂತೆ ಆಗ್ರಹಿಸಿ ನಡೆಯುತ್ತಿರುವ ಸತ್ಯಾಗ್ರಹದ ಭಾಗವಾಗಿ ಸೆ. 9ರಂದು ಹೈದ್ರಾಬಾದ್‌ನಲ್ಲಿ, 10 ರಂದು ಬೆಂಗಳೂರಿನ ರಾಗಿ ಕಣದಲ್ಲಿ, 11 ರಿಂದ 24 ರವರೆಗೆ ದೇಶದ ವಿವಿಧೆಡೆ ಕರ ನಿರಾಕರಣೆ ಸತ್ಯಾಗ್ರಹ ನಡೆಯಲಿದೆ. ಇನ್ನುಳಿದಂತೆ ಸೆ. 24ರಿಂದ ರಾಜ್ಯದ ಬರಪೀಡಿತ ಬಯಲು ಸೀಮೆ ಪ್ರದೇಶದ ಜುಂಜಪ್ಪನಗುಡ್ಡೆ ಧರ್ಮಕ್ಷೇತ್ರದಿಂದ 120 ಕಿ.ಮೀ. ಪಾದಯಾತ್ರೆ ಉದ್ಘಾಟನೆಗೊಳ್ಳಲಿದ್ದು, ಗಾಂಧಿ ಜಯಂತಿಯಂದು ಅರಸೀಕೆರೆ ಕಸ್ತೂರಿ ಬಾ ಆಶ್ರಮಕ್ಕೆ ತಲುಪಲಿದೆ ಎಂದು ಅವರು ವಿವರಿಸಿದರು.







