ಪ್ರಜ್ಞಾವಂತ ಯುವ ಸಮೂಹ ಸೃಷ್ಟಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ: ಸಿಎಂ ಸಿದ್ದರಾಮಯ್ಯ
ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭ

ಬೆಂಗಳೂರು, ಸೆ. 5: ಮಾನವ ಸಂಪನ್ಮೂಲ ಅಭಿವೃದ್ಧಿ ಆಗದೆ ದೇಶದ ಸರ್ವತೋಮುಖ ಅಭಿವೃದ್ಧಿ ಆಗಲು ಸಾಧ್ಯವಿಲ್ಲ. ಈ ದಿಸೆಯಲ್ಲಿ ಪ್ರಜ್ಞಾವಂತ ಯುವ ಸಮೂಹವನ್ನು ತಯಾರು ಮಾಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಗಳವಾರ ನಗರದ ಅಂಬೇಡ್ಕರ್ ಭವನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಗುರುಚೇತನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿಯೊಬ್ಬ ಶಿಕ್ಷಕರೂ ನಿರಂತರವಾಗಿ ಅಧ್ಯಯನಶೀಲರಾಗಬೇಕು. ಒಬ್ಬ ಶಿಕ್ಷಕ, ಶಿಕ್ಷಕರ ಶಿಕ್ಷಕನಾಗುವುದರ ಜೊತೆಗೆ ವಿದ್ಯಾರ್ಥಿಯೂ ಆದ ಮಾತ್ರಕ್ಕೆ ಆತನಿಂದ ಉತ್ತಮ ಶಿಕ್ಷಣ ನೀಡಲು ಸಾಧ್ಯ. ಶಿಕ್ಷಕರ ಕ್ರಿಯಾಶೀಲತೆಯೂ ವಿದ್ಯಾರ್ಥಿಗಳ ಮೇಲೆ ಗಾಢ ಪರಿಣಾಮ ಬೀರಲಿದೆ ಎಂದರು.
ಗುರು ಚೇತನ ಕಾರ್ಯಕ್ರಮದ ಮೂಲಕ ರಾಜ್ಯದ ಸರಕಾರಿ ಶಾಲೆಗಳ ಶಿಕ್ಷಕರನ್ನು ಇನ್ನಷ್ಟು ವಿಷಯವಾರು ಪರಿಣಿತಿಗೊಳಿಸಲಾಗುವುದು. ಆಯ್ದ ಎರಡು ಭಾಷೆಗಳಲ್ಲಿ 10 ದಿನಗಳ ಕಾಲ ಗುರುಚೇತನ ಕಾರ್ಯಕ್ರಮದಡಿ ತರಬೇತಿ ನೀಡಲಾಗುತ್ತದೆ. ಇಂಗ್ಲಿಷ್ ಕಲಿತ ಮಾತ್ರಕ್ಕೆ ಕನ್ನಡ ಮಾಧ್ಯಮವನ್ನು ಕಡೆಗಣಿಸಬಾರದು. ಇಂಗ್ಲಿಷ್ ಅನ್ನು ಭಾಷೆಯಾಗಿ ಕಲಿಯಲಿ ಆದರೆ ಮಾಧ್ಯಮ ಭಾಷೆಯಾಗಿ ಕನ್ನಡ ಕಲಿಯಬೇಕು. 1ನೆ ತರಗತಿಯಿಂದಲೇ ಇಂಗ್ಲಿಷ್ ಅನ್ನು ಕಲಿಯುವುದಕ್ಕೂ ಅವಕಾಶ ಮಾಡಿಕೊಟ್ಟಿದೆ ಎಂದು ಹೇಳಿದರು.
ರಾಚಪ್ಪ ಮೇಸ್ಟ್ರನ್ನು ನೆನದ ಸಿಎಂ: ನಾನು ಒಂದರಿಂದ ನಾಲ್ಕನೇ ತರಗತಿಯವರೆಗೆ ಶಾಲೆಗೆ ಹೋಗೇ ಇರಲಿಲ್ಲ. ರಾಚಪ್ಪ ಎಂಬ ಮೇಸ್ಟ್ರು ನಮ್ಮ ಮನೆಗೆ ಬಂದವರೇ ನನ್ನನ್ನು ಕರೆದುಕೊಂಡು ನೇರವಾಗಿ 5ನೆ ತರಗತಿಗೆ ಸೇರಿಸಿದರು. ಅಂದು ರಾಚಪ್ಪ ಮೇಸ್ಟ್ರು ನಮ್ಮ ಮನೆಗೆ ಬಾರದೇ ಇದ್ದಿದ್ದರೆ ಇಂದು ನಾನು ನಿಮ್ಮ ಮುಂದೆ ಮುಖ್ಯಮಂತ್ರಿ ಆಗಿ ನಿಲ್ಲುತ್ತಿರಲಿಲ್ಲ ಎಂದರು.
ವಿಧಾನ ಪರಿಷತ್ತಿನ ಸದಸ್ಯ ಪುಟ್ಟಣ್ಣಯ್ಯ ಮಾತನಾಡಿ, ಸರಕಾರಿ ಶಾಲೆಗಳ ಉಳಿವಿಗಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಸಲ್ಲಿಸಿರುವ ವರದಿಯನ್ನು ಕೂಡಲೆ ಅನುಷ್ಠಾನಗೊಳಿಸಬೇಕು. ಶಿಕ್ಷಣ ಇಲಾಖೆಯನ್ನು ಭ್ರಷ್ಟ ಮುಕ್ತ ಇಲಾಖೆಯನ್ನಾಗಿ ಮಾಡಲು ವಿಶೇಷ ಮುತುವರ್ಜಿ ವಹಿಸಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.
ಸರಕಾರಿ ಶಾಲೆಗಳ ರಕ್ಷಣೆಗಾಗಿ ಪ್ರೀ ಶಾಲೆಯ ಜೊತೆಗೆ ಇಂಗ್ಲಿಷ್ ಶಿಕ್ಷಣ ಕೂಡಲೆ ಆರಂಭಿಸಬೇಕು. ಎಸೆಸೆಲ್ಸಿ ಮತ್ತು ಪಿಯುಸಿ ಮೌಲ್ಯಮಾಪನ ಕೇಂದ್ರಗಳಿಗೆ ಕಾರ್ಯನಿರ್ವಹಿಸುವ ಶಿಕ್ಷಕರಿಗೆ ಇಂದಿರಾ ಕ್ಯಾಂಟೀನ್ ಊಟ ನೀಡಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಣ ಸಚಿವ ತನ್ವೀರ್ ಸೇಠ್, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ವಿಧಾನಪರಿಷತ್ತಿನ ಸದಸ್ಯ ರಾಮಚಂದ್ರಗೌಡ, ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ. ಶಂಕರ್, ಶಿಕ್ಷಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಅಜಯ್ ಸೇಠ್ ಸೇರಿದಂತೆ ಇತರರು ಇದ್ದರು.
ಶರವಣರಿಗೆ ಕುಟುಕಿದ ಸಿದ್ದರಾಮಯ್ಯ:
ನಮ್ಮ ಕಾಲದಲ್ಲಿ ಸರಕಾರಿ ಶಾಲೆಗಳಿಗೆ ಸೈಕಲ್, ಬಿಸಿಯೂಟ, ಹಾಲು ಸೇರಿದಂತೆ ಯಾವುದೇ ಸವಲತ್ತು ಇರಲಿಲ್ಲ. ಈಗ ಸಾಕಷ್ಟು ಸೌಲಭ್ಯಗಳು ಇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದಾಗ ಮಧ್ಯೆ ಪ್ರವೇಶಿಸಿದ ವಿಧಾನ ಪರಿಷತ್ತಿನ ಸದಸ್ಯ ಶರವಣ, ಕುಮಾರಸ್ವಾಮಿ ಕಾಲದಲ್ಲಿ ಮಕ್ಕಳಿಗೆ ಸೈಕಲ್ ನೀಡಲಾಗಿದೆ ಎಂದರು.
ಈ ಮಾತಿನಿಂದ ಕುಪಿತಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ, ಏ ಶರವಣ ನಾನು ಹೇಳುತ್ತಿರುವುದು ನಮ್ಮ ಕಾಲದ್ದು. ಆಗ ಕುಮಾರಸ್ವಾಮಿ, ನೀನು ಕೂಡ ಹುಟ್ಟಿರಲಿಲ್ಲ ಎಂದು ಏರುಧ್ವನಿಯಲ್ಲಿ ಹೇಳಿದರು. ಜೆಡಿಎಸ್ ಕಚೇರಿಯಲ್ಲಿ ಕುಳಿತುಕೊಂಡು ನಿಮ್ಮ ಕಾರ್ಯಕ್ರಮಗಳ ಜಪ ಮಾಡಿದಂತೆ, ಇಲ್ಲಿ ಜಪ ಮಾಡಬೇಡ ಎಂದು ಕುಟುಕಿದರು.
ನಾನು ಇಂಗ್ಲಿಷ್ ಮತ್ತು ಸಮಾಜ ವಿಷಯದಲ್ಲಿ ತೀರ ದಡ್ಡ. 100ಕ್ಕೆ 35, 40 ಅಂಕ ಗಳಿಸುತ್ತಿದ್ದೆ. ಆದರೆ ಗಣಿತದಲ್ಲಿ 90-95 ಅಂಕಗಳಿಸುತ್ತಿದ್ದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಈ ವೇಳೆ ಮತ್ತೆ ಬಾಯಿ ಹಾಕಿದ ಶರವಣ ಅದಕ್ಕೆ ನೀವು ಹಣಕಾಸು ಮಂತ್ರಿ ಆಗಿ ಹೆಚ್ಚಿನ ಬಾರಿ ಬಜೆಟ್ ಮಂಡಿಸಿದ್ದು ಎಂದು ಹೇಳಿದರು. ನೀನು ಶೆಟ್ಟಿ ಸಮುದಾಯದಿಂದ ಬಂದಿದ್ದಿ, ನೀನು ಕೂಡ ಹಣಕಾಸಿನ ಮಂತ್ರಿ ಆಗುವಂತೆ ಬಿಡು ಎಂದು ಹಾಸ್ಯವಾಗಿ ಹೇಳಿದಾಗ ಸಭೆ ನಗೆಗಡಲಲ್ಲಿ ತೇಲಿತು.







