ಸೆ.16ಕ್ಕೆ ಮೇಲು ಸೇತುವೆ ಉದ್ಘಾಟನೆ: ಮೇಯರ್ ಜಿ.ಪದ್ಮಾವತಿ

ಬೆಂಗಳೂರು, ಸೆ.5: ನಗರದ ಹೊಸಕೆರೆಹಳ್ಳಿ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಸಮೀಪ ನಿರ್ಮಾಣಗೊಂಡಿರುವ ಮೇಲು ಸೇತುವೆಯ ಉದ್ಘಾಟನೆಯನ್ನು ಸೆ.16ರಂದು ನಡೆಯಲಿದೆ ಎಂದು ಮೇಯರ್ ಜಿ.ಪದ್ಮಾವತಿ ತಿಳಿಸಿದ್ದಾರೆ.
ಮಂಗಳವಾರ ನಗರದ ಪಿಇಎಸ್ ಕಾಲೇಜು ಸಮೀಪ ನಿರ್ಮಾಣಗೊಂಡಿರುವ ಮೇಲು ಸೇತುವೆ ಸ್ಥಳಕ್ಕೆ ಭೇಟಿ ನೀಡಿದ ಅವರು, ಕಾಮಗಾರಿ ಬಹುತೇಕವಾಗಿ ಮುಕ್ತಾಯಗೊಂಡಿದೆ. ಸಣ್ಣ ಪುಟ್ಟ ಕೆಲಸಗಳು ಬಾಕಿ ಇಳಿದಿವೆ. ಮುಂದಿನ ವಾರದೊಳಗೆ ಉದ್ಘಾಟನೆಗೆ ಸಜ್ಜುಗೊಳ್ಳಲಿದೆ ಎಂದು ತಿಳಿಸಿದರು.
ಸೆ.16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲು ಸೇತುವೆಯನ್ನು ಉದ್ಘಾಟಿಸಲಿದ್ದಾರೆ. ನಂತರದಲ್ಲಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಲಿದ್ದು, ಈ ಭಾಗದ ವಾಹನ ದಟ್ಟಣೆ ತಗ್ಗಲಿದೆ ಎಂದು ಅವರು ಹೇಳಿದರು.
ಇದಕ್ಕೂ ಮುನ್ನ ಹೊಸಕೆರೆಹಳ್ಳಿಯ ಮುತ್ತು ರಾಜ್ ಜಂಕ್ಷನ್ ಬಳಿಯ ಮೇಲು ಸೇತುವೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಅವರು, ಇನ್ನೂ ಕಾಮಗಾರಿ ಆರಂಭಿಸದೆ ಇದ್ದ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ನಾಳೆಯಿಂದಲೇ ಕಾಮಗಾರಿ ಆರಂಭಿಸಬೇಕು ಎಂದು ಸೂಚನೆ ನೀಡಿದರು.
ಬಳಿಕ ಜೆಪಿ ನಗರದ ದಾಲ್ಮಿಯಾ ಜಂಕ್ಷನ್ ಬಳಿ ನಿರ್ಮಿಸುತ್ತಿರುವ ಮೇಲು ಸೇತುವೆ ಕಾಮಗಾರಿ ತಪಾಸಣೆ ನಡೆಸಿದ ಮೇಯರ್, ಕಾಮಗಾರಿಯು ನಿಧಾನಗತಿಯಲ್ಲಿ ನಡೆಯುತ್ತಿರುವ ಬಗ್ಗೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಕಳೆದ 3 ತಿಂಗಳಿಂದ ಕಾಮಗಾರಿ ಚುರುಕಾಗಿ ನಡೆಯುತ್ತಿಲ್ಲ ಎಂದು ಸಾರ್ವಜನಿಕರಿಂದ ದೂರುಗಳು ಬಂದಿವೆ. ಕಾಮಗಾರಿಯ ವೇಗವನ್ನು ಹೆಚ್ಚಿಸಿ ಡಿಸೆಂಬರ್ ವೇಳೆಗೆ ಪೂರ್ಣಗೊಳಿಸಬೇಕೆಂದು ಸೂಚಿಸಿದರು.







