ಚಿಕ್ಕಮಗಳೂರು: ಜೆಡಿಎಸ್ ಜಿಲ್ಲಾ ಮಟ್ಟ ಸಭೆ

ಚಿಕ್ಕಮಗಳೂರು, ಸೆ.5: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಾತ್ಯಾತೀತ ಜನತಾದಳವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ತಮ್ಮಲ್ಲಿರುವ ಗೊಂದಲ ಮತ್ತು ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಂದಾಗಲೇಬೇಕು ಎಂದು ಜೆಡಿಎಸ್ ಜಿಲ್ಲಾ ಉಸ್ತುವಾರಿ ಪಟೇಲ್ ಶಿವರಾಂ ಮನವಿ ಮಾಡಿದರು.
ನಗರದ ಜೆಡಿಎಸ್ ಕಚೇರಿಯಲ್ಲಿ ನಡೆದ ಪಕ್ಷದ ವಿವಿಧ ಘಟಕಗಳ ಮುಖಂಡರ ಜಿಲ್ಲಾ ಮಟ್ಟದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಾಂಗ್ರೆಸ್ ಮತ್ತು ಬಿಜೆಪಿಯ ಮಿತಿಮೀರಿದ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮತ್ತು ದುರಾಡಳಿತದಿಂದ ರಾಜ್ಯದ ಜನತೆ ಬೇಸತ್ತಿದ್ದಾರೆ, ಹಳ್ಳಿ ಹಳ್ಳಿಗಳಲ್ಲೂ ಜನ ಜೆಡಿಎಸ್‍ನತ್ತ ಮುಖ ಮಾಡುತ್ತಿದ್ದಾರೆ. ಈ ಸಂದರ್ಭವನ್ನು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸಮರ್ಪಕವಾಗಿ ಬಳಸಿಕೊಂಡು ಐದು ಕ್ಷೇತ್ರಗಳನ್ನು ಗೆಲ್ಲಿಸುವ ಮೂಲಕ ಜಿಲ್ಲೆಯನ್ನು ಜೆಡಿಎಸ್ ಭದ್ರಕೋಟೆಯನ್ನಾಗಿ ಮಾಡಬೇಕು ಎಂದು ಹೇಳಿದರು.
ಜಿಲ್ಲಾ ವೀಕ್ಷಕ ಕುಮಾರಸ್ವಾಮಿ ಮಾತನಾಡಿ, ಮುಂದಿನ ವಿಧಾನಸಭಾ ಚುನಾವಣೆ ಪಕ್ಷಕ್ಕೆ ಪ್ರತಿಷ್ಠೆಯ ಕಣವಾಗಿದೆ, ಮುಖಂಡರು ಮತ್ತು ಕಾರ್ಯಕರ್ತರು ಮಾಡು ಇಲ್ಲವೇ ಮಡಿ ಎಂಬಂತೆ ಚುನಾವಣೆಯನ್ನು ಎದುರಿಸಲೇ ಬೇಕಾಗಿದೆ, ಈ ಚುನಾವಣೆಯಲ್ಲಿ ಸೋತರೆ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಲಿದೆ ಎಂದು ಎಚ್ಚರಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಚ್.ದೇವರಾಜ್ ಮಾತನಾಡಿ, ಜಿಲ್ಲೆಯಲ್ಲಿರುವ ಜ್ವಲಂತ ಸಮಸ್ಯೆಗಳ ವಿರುದ್ದ ಹೋರಾಟದ ಮೂಲಕ ಕಾರ್ಯಕರ್ತರು ಮತ್ತು ಮುಖಂಡರು ಪಕ್ಷವನ್ನು ಬಲಪಡಿಸಬೇಕು ಎಂದು ಸಲಹೆ ಮಾಡಿದರು.
ಮೂಡಿಗೆರೆ ಶಾಸಕ ಬಿ.ಬಿ.ನಿಂಗಯ್ಯ ಮಾತನಾಡಿ, ಮುಖಂಡರು ಮತ್ತು ಕಾರ್ಯಕರ್ತರು ಸಣ್ಣಪುಟ್ಟ ಲೋಪದೋಶಗಳನ್ನು ತಿದ್ದಿಕೊಂಡು ಪಕ್ಷವನ್ನು ಸಂಘಟಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸಲು ಅನುಕೂಲವಾಗುವಂತೆ ತಕ್ಷಣ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.
ಸಭೆಯಲ್ಲಿ ಜಿಲ್ಲಾಧ್ಯಕ್ಷ ರಂಜನ್ ಅಜಿತ್‍ಕುಮಾರ್ ಅಧ್ಯಕ್ಷತೆ ವಹಿಸಿದ್ದರು, ಮಾಜಿ ಶಾಸಕ ಎಸ್.ಎಲ್.ಧರ್ಮೇಗೌಡ ಪಕ್ಷದ ಮುಖಂಡರಾದ ಎಚ್.ಜಿ.ವೆಂಕಟೇಶ್, ಎಂ.ಎಸ್.ಬಾಲಕೃಷ್ಣೇಗೌಡ, ಜ್ಯೋತಿ ಈಶ್ವರ್, ಪದ್ಮಾ ತಿಮ್ಮೇಗೌಡ, ಟಿ.ಶ್ರೀದೇವಿ, ಮಂಜಪ್ಪ, ನಿಸಾರ್ ಅಹ್ಮದ್, ಆರ್.ದೇವಿಪ್ರಸಾದ್, ದೇವರಾಜ್ ಅರಸ್, ಜಯರಾಜ್ ಅರಸ್, ಕೋಟೆ ವಿನಯ್, ಡಿ.ಜೆ.ಸುರೇಶ್, ಜಿ.ಹೆಚ್.ಚಂದ್ರಪ್ಪ, ಹೊಲದಗದ್ದೆ ಗಿರೀಶ್, ಟಿ.ಹೆಚ್.ಶಿವಶಂಕರಪ್ಪ, ಎಂ.ಡಿ.ರಮೇಶ್ ಉಪಸ್ಥಿತರಿದ್ದರು.







