ಶಿಕ್ಷಕರ ದಿನಾಚರಣೆ: ಶಿಕ್ಷಕನಾಗಿ ವಿದ್ಯಾರ್ಥಿಗಳಿಗೆ ಪಾಠ ಮಾಡಿದ ಶಾಸಕ ದತ್ತ

ಕಡೂರು, ಸೆ. 5: ಶಾಸಕ ವೈ.ಎಸ್.ವಿ. ದತ್ತ ಅವರು ಮಂಗಳವಾರ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಮೂಲಕ ಶಿಕ್ಷಕರ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಿದರು.
ಸೊನ್ನೆಯಿಂದ ಸೊನ್ನೆ ಭಾಗಿಸಿದರೆ ಬರುವ ಭಾಗಲಬ್ಧವೇನು? ದಿನ ನಿತ್ಯದ ಜೀವನದಲ್ಲಿ ಸಾವಯವ ರಸಾಯನಶಾಸ್ತ್ರ ಯಾವುದು? ಮುಂತಾದ ವಿಷಯಗಳ ಮೇಲೆ ಬೆಳಕು ಚೆಲ್ಲುವಂತಹ ಪಾಠಗಳು ದತ್ತ ಅವರಿಂದ ವಿದ್ಯಾರ್ಥಿಗಳಿಗೆ ಲಭ್ಯವಾಯಿತು. ಖ್ಯಾತ ಗಣಿತ ತಜ್ಞ ಡಾ. ರಾಮಾನುಜನ್ ತಮ್ಮ ಬಾಲ್ಯದ ಶಿಕ್ಷಣ ಪಡೆಯುವ ಸಂದರ್ಭ ಅವರಿಗೆ ಗಣಿತ ಶಿಕ್ಷಕರಾಗಿದ್ದ ವ್ಯಕ್ತಿ ಯಾವುದೇ ಸಂಖ್ಯೆಯನ್ನು ಅದೇ ಸಂಖ್ಯೆಯಿಂದ ಭಾಗಿಸಿದರೆ ಶೇಷ 1 ಬರುತ್ತದೆ ಎಂದು ಹೇಳುತ್ತಿದನ್ನು ಶಾಸಕರು ಉದಾಹರಿಸಿದರು.
ಆಗ ಬೇರೆ ಎಲ್ಲಾ ವಿದ್ಯಾರ್ಥಿಗಳು ಮೌನವಾಗಿ ಆಲಿಸಿದರೆ ವಿದ್ಯಾರ್ಥಿ ರಾಮಾನುಜನ್ ಮಾತ್ರ ಆ ಶಿಕ್ಷಕರಿಗೆ ಸೊನ್ನೆಯಿಂದ ಸೊನ್ನೆಯನ್ನು ಭಾಗಿಸಿದರೆ 1 ಬರುತ್ತದೆಯೇ ಎಂದು ಪ್ರಶ್ನೆ ಎಸೆದರು. ಇದರಿಂದ ಆ ಶಿಕ್ಷಕರು ತಬ್ಬಿಬಾದರೆ ಮುಂದಿನ ದಿನಗಳಲ್ಲಿ ಆ ವಿದ್ಯಾರ್ಥಿ ರಾಮಾನುಜನ್ ಇದಕ್ಕೆ ಉತ್ತರ ಕಂಡು ಹಿಡಿದರು. ಈ ಪ್ರಶ್ನೆಯೇ ಗಣಿತದ ಕ್ಯಾಲ್ಕೂಲಸ್ ಮೂಲ. ನಂತರದ ದಿನಗಳಲ್ಲಿ ಸಂಖ್ಯೆಗಳ ಉತ್ಪತ್ತಿ, ಸಂಖ್ಯೆಗಳ ವಿಭಿನ್ನತೆ ಮತ್ತು ಸಂಖ್ಯೆಗಳ ಗುಣದ ಬಗ್ಗೆ ಇದೇ ರಾಮಾನುಜನ್ ದೊಡ್ಡ-ದೊಡ್ಡ ಪುಸ್ತಕಗಳನ್ನು ಬರೆದರಲ್ಲದೆ ಗಣಿತವನ್ನು ಸರಳೀಕರಣ ಮಾಡಿ ಸಾಮಾನ್ಯರ ಕೈಗೂ ಸಿಗುವಂತೆ ಮಾಡಿದರು ಎಂದು ತಿಳಿಸಿದರು.
ಗಣಿತ ಕಬ್ಬಿಣದ ಕಡಲೆಯಲ್ಲ. ಅದು ಮೆದುಳಿಗೆ ಕೂಡುವ ಒಂದು ಕಸರತ್ತು ಎಂಬ ಬಗ್ಗೆ ಶಾಸಕರು ಒಂದು ಸರಳ ಕಥೆಯ ಮೂಲಕ ವಿದ್ಯಾರ್ಥಿಗಳಿಗೆ ವಿವರಿಸುತ್ತಾ ಯಾವುದೇ ಸಂಖ್ಯೆಗಳನ್ನು ಹೇಗೆ ಬೇಕಾದರೂ ಕೂಡಬಹುದು, ಕಳೆಯಬಹುದು ಆದರೆ ಉತ್ತರ ಮಾತ್ರ ಒಂದೇ ಇರಬೇಕು. ಭೌತಶಾಸ್ತ್ರದ ಖ್ಯಾತ ವಿಜ್ಞಾನಿ ಆಯಿರ್‍ಸ್ಟೆಡ್ ಮತ್ತು ಫ್ಯಾರಡೆ ಬಗ್ಗೆ ಹೇಳುತ್ತಾ ವಿಜ್ಞಾನಿ ಆಯಿರ್‍ಸ್ಟೆಡ್ ತನ್ನ ಮನೆಯಲ್ಲಿ ವಿದ್ಯುತ್ ದೀಪವನ್ನು ಉರಿಸಲು ಹೋದಾಗ ಪಕ್ಕದಲ್ಲೇ ಇದ್ದ ಅಯಸ್ಕಾಂತೀಯ ಮುಳ್ಳು ಅಲುಗಾಡಿತು. ಇದರಿಂದ ವಿದ್ಯುತ್ ಶಕ್ತಿಗೆ ಅಯಸ್ಕಾಂತೀಯ ಗುಣಗಳು ಇವೇ ಎಂದು ಪತ್ತೆಯಾಯಿತು ಎಂದು ನುಡಿದರು.
ಭವಿಷ್ಯದಲ್ಲಿ ಇದೇ ತತ್ವವವನ್ನು ಉಲ್ಟಾ ಮಾಡಿದ ವಿಜ್ಞಾನಿ ಫ್ಯಾರಡೆ ಅಯಸ್ಕಾಂತೀಯ ಶಕ್ತಿಗಳಿಂದ ವಿದ್ಯುತ್ ಉತ್ಪಾದಿಸಲು ಸಾಧ್ಯವಿದೆ ಎಂದು ಸಂಶೋಧಿಸಿದ. ಈ ಇಬ್ಬರೂ ವಿಜ್ಞಾನಿಗಳ ಸಂಶೋಧನೆಯೇ ಇಂದು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿರುವ ವಿದ್ಯುತ್ ಕಾಂತೀಯ ಪ್ರೇರಣೆ ಎಂದರು.







