ಹೊರರಾಜ್ಯಗಳ ವಾಹನಗಳ ಮೇಲಿನ ತೆರಿಗೆಯನ್ನು ವಾಪಸ್ ಮಾಡಿ: ಕರ್ನಾಟಕಕ್ಕೆ ಸುಪ್ರೀಂ ನಿರ್ದೇಶ

ಹೊಸದಿಲ್ಲಿ,ಸೆ.5: ಹೊರರಾಜ್ಯಗಳಲ್ಲಿ ನೋಂದಣಿಗೊಂಡಿರುವ ಮತ್ತು ರಾಜ್ಯದಲ್ಲಿ 30 ದಿನಗಳಿಗೂ ಮೀರಿ ಸಂಚರಿಸುತ್ತಿರುವ ವಾಹನಗಳಿಗೆ ವಿಧಿಸಲಾಗಿರುವ ಜೀವಿತಾವಧಿ ತೆರಿಗೆಯನ್ನು ವಾಪಸ್ ಮಾಡುವಂತೆ ಸರ್ವೋಚ್ಚ ನ್ಯಾಯಾಲಯವು ಕರ್ನಾಟಕ ಸರಕಾರಕ್ಕೆ ತಿಳಿಸಿದೆ. ಆದರೆ ಮೇಲ್ಮನವಿಗೆ ಸಂಬಂಧಿಸಿದಂತೆ ತೀರ್ಪು ರಾಜ್ಯದ ಪರವಾಗಿ ಬಂದರೆ ತೆರಿಗೆಯನ್ನು ತಾವು ಪುನಃ ಪಾವತಿಸುವುದಾಗಿ ವಾಹನ ಮಾಲಿಕರಿಂದ ಮುಚ್ಚಳಿಕೆಯನ್ನು ಬರೆಸಿಕೊಳ್ಳಲು ಅದು ರಾಜ್ಯ ಸರಕಾರಕ್ಕೆ ಅನುಮತಿ ನೀಡಿದೆ.
ನ್ಯಾಯಮೂರ್ತಿಗಳಾದ ಜೆ.ಚೆಲಮೇಶ್ವರ ಮತ್ತು ಎಸ್.ಅಬ್ದುಲ್ ನಝೀರ್ ಅವರ ಪೀಠವು ಕರ್ನಾಟಕ ಮೋಟಾರು ವಾಹನಗಳ ತೆರಿಗೆ(ತಿದ್ದುಪಡಿ)ಕಾಯ್ದೆ, 2014ರ ನಿಯಮಾವಳಿಗಳನ್ನು ಅಸಾಂವಿಧಾನಿಕ ಮತ್ತು ಅಧಿಕಾರಾತೀತವೆಂದು ಬಣ್ಣಿಸಿ ರದ್ದುಗೊಳಿಸಿದ್ದ ಕರ್ನಾಟಕ ಉಚ್ಚ ನ್ಯಾಯಾಲಯದ 2016,ಮಾ.10ರ ಆದೇಶದ ಕಾರ್ಯಾಚರಣೆಗೆ ತಡೆಯಾಜ್ಞೆಯನ್ನು ನೀಡಲು ಮತ್ತೊಮ್ಮೆ ನಿರಾಕರಿಸಿತು.
36 ಕೋ.ರೂ.ತೆರಿಗೆ ವಾಪಸಾತಿಯನ್ನು ಕೋರಿ ಜಿಲ್ಲಾ ಪ್ರಾದೇಶಿಕ ಸಾರಿಗೆ ಕಚೇರಿ ಗಳಲ್ಲಿ ಸಲ್ಲಿಸಲಾಗಿರುವ ಸುಮಾರು 190 ಅರ್ಜಿಗಳನ್ನು ಅಂಗೀಕರಿಸದಿರಲು ಅನುಮತಿಯನ್ನು ಕೋರಿ ರಾಜ್ಯ ಸರಕಾರವು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯವು ತನ್ನ ಆದೇಶವನ್ನು ಹೊರಡಿಸಿದೆ.
ಉಚ್ಚ ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆ ನೀಡಲು ಸರ್ವೋಚ್ಚ ನ್ಯಾಯಾಲಯವು ಈ ಹಿಂದೆ, ಫೆ.13ರಂದು ನಿರಾಕರಿಸಿತ್ತು.





