ಪೊಲೀಸರ ಮೇಲೆ ಹಲ್ಲೆ ನಡೆಸಲು ಕಾರ್ಯಕರ್ತರ ಹುರಿದುಂಬಿಸಿದ ಬಿಜೆಪಿ ಮುಖಂಡ

ಕೋಲ್ಕತಾ, ಸೆ.5: ಪೊಲೀಸರ ಮೇಲೆ ಹಲ್ಲೆ ನಡೆಸುವುದು ಪಶ್ಚಿಮ ಬಂಗಾಲದಲ್ಲಿ ಪ್ರಜಾಪ್ರಭುತ್ವದ ಹಕ್ಕಾಗಿದೆ- ಹೀಗೆಂದು ಪಶ್ಚಿಮಬಂಗಾಲ ಬಿಜೆಪಿ ಘಟಕಾಧ್ಯಕ್ಷ ದಿಲೀಪ್ ಘೋಷ್ ಘೋಷಿಸಿರುವ ವೀಡಿಯೊ ದೃಶ್ಯಾವಳಿ ಈಗ ವೈರಲ್ ಆಗಿದೆ .
ಹೌರದಲ್ಲಿ ಸೋಮವಾರ ನಡೆದ ಸಾರ್ವಜನಿಕ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದ ದಿಲೀಪ್ ಘೋಷ್, ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ದೂರು ದಾಖಲಿಸಿಕೊಳ್ಳಲು ನಿರಾಕರಿಸುವ ಪೊಲೀಸರನ್ನು ಹಿಗ್ಗಾಮುಗ್ಗಾ ಥಳಿಸುವಂತೆ ಕರೆ ನೀಡಿದ್ದಾರೆ. ಅಲ್ಲದೆ, ಪಶ್ಚಿಮಬಂಗಾಲದಲ್ಲಿ ಇದು ಪ್ರಜಾಪ್ರಭುತ್ವದ ಹಕ್ಕಾಗಿದೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಪೊಲೀಸರ ಮೇಲೆ ಹಲ್ಲೆ ನಡೆಸಿದ ಟಿಎಂಸಿ ಕಾರ್ಯಕರ್ತರಿಗೆ ಕಾನೂನುಕ್ರಮದ ವಿನಾಯಿತಿ ಇರುವುದಾದರೆ ನಾವು ಕೂಡಾ ಈರೀತಿ ಯಾಕೆ ಮಾಡಬಾರದು. ಹೀಗೆ ಮಾಡುವುದರಲ್ಲಿ ತಪ್ಪಿಲ್ಲ, ಯಾಕೆಂದರೆ ಪ.ಬಂಗಾಲದಲ್ಲಿ ಇದೂ ಕೂಡಾ ಒಂದು ಪ್ರಜಾಪ್ರಭುತ್ವದ ಹಕ್ಕಾಗಿದೆ. ಪ.ಬಂಗಾಲದಲ್ಲಿ ನೀವು ಪೊಲೀಸರನ್ನು ಥಳಿಸಿದರೆ, ಮುಂದೆ ಅಧಿಕಾರಕ್ಕೆ ಬರುವುದರಲ್ಲಿ ಸಂಶಯವಿಲ್ಲ ಎಂದು ಬಿಜೆಪಿ ಕಾರ್ಯಕರ್ತರಿಗೆ ಘೋಷ್ ಕರೆನೀಡಿರುವ ವೀಡಿಯೊ ದೃಶ್ಯಾವಳಿ ವೈರಲ್ ಆಗಿದೆ.
ಟಿಎಂಸಿ ಕಾರ್ಯಕರ್ತರು ನಿರಂತರವಾಗಿ ನಮ್ಮ ಕಾರ್ಯಕರ್ತರನ್ನು ಥಳಿಸುತ್ತಿದ್ದಾರೆ. ನಮ್ಮನ್ನು ಥಳಿಸಿ ನಮ್ಮ ಮೇಲೆಯೇ ಕೇಸು ದಾಖಲಿಸುತ್ತಿದ್ದಾರೆ. ಇದು ಇನ್ನು ಮುಂದಕ್ಕೆ ನಡೆಯೋದಿಲ್ಲ. ಪೆಟ್ಟು ತಿನ್ನುವುದರ ಜೊತೆಗೆ, ಕೋರ್ಟ್ ಕೇಸು ಎಂದು ಅಲೆದಾಡಲು ಸಾಧ್ಯವಿಲ್ಲ. ಇನ್ನು ಮುಂದೆ- ಒಂದಾ ನಾವು ಪೆಟ್ಟು ತಿಂದು ಅವರ ವಿರುದ್ಧ ಕೇಸು ದಾಖಲಿಸಬೇಕು ಅಥವಾ ಅವರು ಪೆಟ್ಟು ತಿಂದು ನಮ್ಮ ವಿರುದ್ಧ ಕೇಸು ದಾಖಲಿಸಬೇಕು. ಟಿಎಂಸಿ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲು ನಿರಾಕರಿಸುವ ಪೊಲೀಸರನ್ನೂ ಥಳಿಸಬೇಕು. ಮೊದಲು ಅವರನ್ನು ಎಚ್ಚರಿಸಬೇಕು. ಆಗಲೂ ಪ್ರಕರಣ ದಾಖಲಿಸಿಕೊಳ್ಳಲು ನಿರಾಕರಿಸಿದರೆ ಠಾಣೆಗೆ ಮುತ್ತಿಗೆ ಹಾಕಿ ಥಳಿಸಬೇಕು ಎಂದು ಘೋಷ್ ಹೇಳಿದ್ದಾರೆ.
ಘೋಷ್ ವಿವಾದಾಸ್ಪದ ಹೇಳಿಕೆ ನೀಡುವುದು ಇದೇ ಮೊದಲೇನಲ್ಲ. ಈ ಹಿಂದೊಮ್ಮೆ ಅವರು- ಮಮತಾ ಬ್ಯಾನರ್ಜಿ ದಿಲ್ಲಿಗೆ ಹೋದರೆ ಆಕೆಯ ಜುಟ್ಟು ಹಿಡಿದು ಎಳೆದು ಹೊರಹಾಕಬೇಕು ಎಂಬ ಹೇಳಿಕೆ ನೀಡಿದ್ದರು. ಅಲ್ಲದೆ ಪ.ಬಂಗಾಲದಲ್ಲಿ ರಾಮನವಮಿಯನ್ನು ಆಚರಿಸುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಘೋಷ್, ಇದು ‘ರಾಮ್‌ಝಾದ ’ (ಶ್ರೀರಾಮನ ಮಕ್ಕಳು) ಮತ್ತು ‘ಹರಾಮ್‌ಝಾದ’ (ಅಕ್ರಮ ಸಂಬಂಧದಿಂದ ಹುಟ್ಟಿದ ಮಕ್ಕಳು)ರ ನಡುವಿನ ಹೋರಾಟವಾಗಿದೆ ಎಂದಿದ್ದರು.







