ಶಾಂತಿಮೊಗರು: ಸ್ನಾನಕ್ಕಿಳಿದ ಸಹೋದರಿಬ್ಬರು ನೀರುಪಾಲು
ಪುತ್ತೂರು, ಸೆ. 5: ಮೂವರು ನದಿಯಲ್ಲಿ ಈಜಾಡಲು ಹೊಗಿ ಸಹೋದರರಿಬ್ಬರು ನೀರು ಪಾಲಾಗಿ ಇನ್ನೋರ್ವ ಈಜಿ ದಡ ಸೇರಿದ ಘಟನೆ ಮಂಗಳವಾರ ಸಂಜೆ ಪುತ್ತೂರು ತಾಲೂಕಿನ ಕುದ್ಮಾರು ಗ್ರಾಮದ ಶಾಂತಿಮೊಗರು ಬಳಿ ಕುಮಾರಧಾರಾ ನದಿಯಲ್ಲಿ ನಡೆದಿದೆ.
ಪುತ್ತೂರು ತಾಲೂಕಿನ ಕಡಬ ಕುಟ್ರುಪ್ಪಾಡಿ ಗ್ರಾಮದ ಅಲರ್ಮೆ ದಿ. ಚೆನ್ನಪ್ಪ ಪೂಜಾರಿಯವರ ಪುತ್ರರಾದ ಹರಿಪ್ರಸಾದ್ (30) ಹಾಗೂ ಸತ್ಯಪ್ರಸಾದ್(25) ನೀರುಪಾಲಾದವರು. ಇವರ ಜೊತೆ ನೀರಿಗಿಳಿದಿದ್ದ ಅವರ ಚಿಕ್ಕಪ್ಪನ ಮಗ ರೋಹಿತ್ (25) ಈಜಿ ಬಚಾವಾಗಿದ್ದಾರೆ .
ಸೋಮವಾರ ಮೂವರೂ ಏನೆಕಲ್ಲಿನ ಚಿಕ್ಕಮ್ಮನ ಮನೆಗೆ ಕಾರ್ಯಕ್ರಮಕ್ಕೆಂದು ಹೋಗಿದ್ದರು. ಮಂಗಳವಾರ ಶಾಂತಿಮೊಗರು ಮೂಲಕ ಕಡಬಕ್ಕೆ ತೆರಳು ವವರಿದ್ದು, ಹೋಗುವ ಮೊದಲು ಶಾಂತಿಮೊಗರು ಸೇತುವೆ ಬಳಿ ಸ್ನಾನಕ್ಕೆಂದು ಮೂವರು ನೀರಿಗಿಳಿದಿದ್ದು ಆಳವನ್ನು ಅರಿಯದೇ ಅಪಾಯಕ್ಕೀಡಾಗಿದ್ದಾರೆ. ನೀರುಪಾಲಾದವರ ಪತ್ತೆಗಾಗಿ ಸ್ಥಳೀಯ ಈಜುಗಾರರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿಗಳು ಪ್ರಯತ್ನಿಸುತ್ತಿದ್ದು ರಾತ್ರಿಯ ತನಕ ಪತ್ತೆಯಾಗಿಲ್ಲ. ಬೆಳ್ಳಾರೆ ಠಾಣಾ ಎಸ್‌ಐ ಎಂ.ವಿ. ಚೆಲುವಯ್ಯ ಹಾಗೂ ಸಿಬ್ಬಂದಿಗಳು ಸ್ಥಳದಲ್ಲಿ ಉಪಸ್ಥಿತರಿದ್ದಾರೆ.
ಹರಿಪ್ರಸಾದ್ ಕಡಬದಲ್ಲಿ ಟೈಲರ್ ವೃತ್ತಿಯೊಂದಿಗೆ, ರಾತ್ರಿ ಪಾಳಿಯಲ್ಲಿ ಬಿಎಸ್‌ಎನ್‌ಎಲ್ ಎಕ್ಸ್‌ಚೇಂಜ್ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಹರಿಪ್ರಸಾದ್ ವಿವಾಹಿತರಾಗಿದ್ದು, ಇವರ ಪತ್ನಿ ಕಡಬ ಗ್ರಾಮ ಕರಣಿಕರ ಕಚೇರಿಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ಮೂರುವರೆ ವರ್ಷದ ಪುತ್ರನಿದ್ದಾನೆ.
ಸತ್ಯಪ್ರಸಾದ್ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು ಸೋಮವಾರವಷ್ಟೇ ಮನೆಗೆ ಆಗಮಿಸಿದ್ದು, ಬುಧವಾರ ಬೆಂಗಳೂರಿಗೆ ವಾಸಾಗುತ್ತಿರುವವರಾಗಿದ್ದರು.
ಘಟನಾ ಸ್ಥಳಕ್ಕೆ ಸುಳ್ಯ ಶಾಸಕ ಎಸ್. ಅಂಗಾರ, ಜಿಪಂ ಸದಸ್ಯರಾದ ಪ್ರಮೀಳಾ ಜನಾರ್ದನ, ಪಿ.ಪಿ. ವರ್ಗೀಸ್, ಕಡಬ ತಹಸೀಲ್ದಾರ್ ಜಾನ್ ಪ್ರಕಾಶ್ ರೋಡ್ರಿಗಸ್, ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ, ತಾಪಂ ಸದಸ್ಯರಾದ ಲಲಿತಾ ಈಶ್ವರ, ತಾರಾ ತಿಮ್ಮಪ್ಪ, ಜಿಲ್ಲಾ ಕೆಡಿಪಿ ಸದಸ್ಯ ಸತೀಶ್ ಕುಮಾರ್ ಕೆಡೆಂಜಿ, ಜಿಲ್ಲಾ ಸಹಕಾರ ಭಾರತೀಯ ಅಧ್ಯಕ್ಷ ಉದಯ ರೈ ಮಾದೋಡಿ, ಪುತ್ತೂರು ಎಪಿಎಂಸಿ ಸದಸ್ಯ ದಿನೇಶ್ ಮೆದು ಭೇಟಿ ನೀಡಿದರು.
ರವಿವಾರವೂ ನಡೆದಿತ್ತು ಅವಘಡ
ರವಿವಾರ ಸೇತುವೆಯಿಂದ ಸುಮಾರು 500ಮೀಟರ್ ಮುಂಭಾಗದಲ್ಲಿ ಸ್ಥಳೀಯ ಪ್ಯಾಕ್ಟರಿಯೊಂದರಲ್ಲಿ ಕೆಲಸಕ್ಕಿದ್ದ ಮಂಗಳೂರಿನ ಗಂಜಿಮಠದ ಹರಿಶ್ಚಂದ್ರ ನೀರುಪಾಲಾಗಿದ್ದು ಮಂಗಳವಾರ ಅವರ ಮೃತದೇಹ ಪತ್ತೆಯಾಗಿತ್ತು. ಉಪ್ಪಿನಂಗಡಿಯ ಮುಹಮ್ಮದ್ ಬಂದಾರ್‌ರೊಂದಿಗೆ ಸ್ಥಳೀಯರು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಶೋಧಕಾರ್ಯಾಚರಣೆ ನಡೆಸಿದ್ದರು.







