ಸದೃಢ ಸಮಾಜ ನಿರ್ಮಾಣದ ಜವಾಬ್ದಾರಿ ಶಿಕ್ಷಕರ ಮೇಲಿದೆ: ಶಾಸಕ ಬಿ.ವೈ.ರಾಘವೇಂದ್ರ

ಶಿಕಾರಿಪುರ, ಸೆ.5: ಶೈಕ್ಷಣಿಕವಾಗಿ ತಾಲೂಕು ಜಿಲ್ಲೆಯಲ್ಲಿ ಕಡೆಯ ಸ್ಥಾನದಲ್ಲಿದ್ದು, ಸಾಂಸ್ಕೃತಿಕವಾಗಿ ಬಹು ದೊಡ್ಡ ಇತಿಹಾಸವನ್ನು ಹೊಂದಿರುವ ತಾಲೂಕು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಶಾಸಕ ಬಿ.ವೈ. ರಾಘವೇಂದ್ರ ಪರೋಕ್ಷವಾಗಿ ಎಚ್ಚರಿಸಿದರು.
ಮಂಗಳವಾರ ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸದೃಢ ಸಮಾಜ ನಿರ್ಮಾಣ ಬಹು ದೊಡ್ಡ ಜವಾಬ್ದಾರಿ ಎಂದು ಶಿಕ್ಷಕರು ಅರಿತು, ಎಚ್ಚರಿಕೆಯಿಂದ ಸೇವೆ ಸಲ್ಲಿಸಿದಾಗ ಮಾತ್ರ ಬಲಿಷ್ಠ ರಾಷ್ಟ್ರ ನಿರ್ಮಾಣವಾಗಲಿದೆ. ಸಮಾಜದಲ್ಲಿ ಪ್ರತಿಯೊಬ್ಬರಿಗೂ ಬದುಕುವ ದಾರಿ ತೋರಿಸುವ ಶಿಕ್ಷಕ ಹಲವು ಸಮಸ್ಯೆಯನ್ನು ಎದುರಿಸುತ್ತಿದ್ದು, ಗೌರವದಿಂದ ಜೀವಿಸಲು ವೇತನ ಪರಿಷ್ಕರಣೆಯ ಅಗತ್ಯವಿದೆ ಎಂದ ಅವರು, ತಾಲೂಕಿನ ಹಲವೆಡೆ ಕೊಠಡಿ, ಪುಸ್ತಕ ಸಹಿತ ವಿವಿಧ ಸಮಸ್ಯೆ ಎದುರಿಸುತ್ತಿದ್ದರೂ ಸಾಂಸ್ಕೃತಿಕವಾಗಿ ಭವ್ಯ ಇತಿಹಾಸ ಹೊಂದಿರುವ ತಾಲೂಕು ಶೈಕ್ಷಣಿಕವಾಗಿ ಪ್ರಗತಿ ಹೊಂದಲು ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಕಳೆದ ಎಸೆಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ಕಡೆಯ ಸ್ಥಾನದಲ್ಲಿದ್ದು, ತಾಲೂಕಿನ ಹಿರಿಮೆಯನ್ನು ಕಾಪಾಡುವ ಹೊಣೆಗಾರಿಕೆ ಶಿಕ್ಷಕ ವೃಂದದ ಮುಂದಿದೆ ಎಂದು ಎಚ್ಚರಿಸಿದರು.
ಡಯಟ್ ಉಪನ್ಯಾಸಕ ನಾಗೇಂದ್ರಪ್ಪ ಪ್ರಾಸ್ಥಾವಿಕವಾಗಿ ಮಾತನಾಡಿ, ಗುಣಾತ್ಮಕ ಶಿಕ್ಷಣ ಇಂದಿನ ತುರ್ತು ಅಗತ್ಯವಾಗಿದ್ದು ಈ ದಿಸೆಯಲ್ಲಿ ಶಿಕ್ಷಣಕ್ಕೆ ಸ್ಪಷ್ಟವಾದ ರೂಪವನ್ನು ನೀಡಲು ರಾಜ್ಯಸರ್ಕಾರ ಹೆಚ್ಚಿನ ಕಾಳಜಿ ವಹಿಸಿದೆ ಎಂದ ಅವರು ರಾಷ್ಟ್ರಕ್ಕೆ ಭದ್ರ ಬುನಾದಿಯನ್ನು ಕಲ್ಪಿಸುವ ಶಿಕ್ಷಕರಿಗೆ ಆಳವಾದ ತರಬೇತಿಯ ಅಗತ್ಯವಿದ್ದು ಇದರಿಂದ ಗುಣಾತ್ಮಕ ಶಿಕ್ಷಣಕ್ಕೆ ನಾಂದಿಯಾಗಲಿದೆ ಎಂದು ತಿಳಿಸಿದರು.
ಶಾಸಕ ರಾಘವೇಂದ್ರ ಗುರುಚೇತನ ಸಂಚಿಕೆಯ ಲೋಗೋ ಹಾಗೂ ಮಾಡೆಲ್‌ಗಳನ್ನು ಬಿಡುಗಡೆಗೊಳಿಸಿದರು. ನಿವೃತ್ತ ಶಿಕ್ಷಕರನ್ನು ಹಾಗೂ ಪ್ರಸಕ್ತ ಸಾಲಿನ ಅತ್ಯುತ್ತಮ ಪುರಸ್ಕೃತ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಹ್ಯಾದ್ರಿ ಕಲಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಮೋಹನ ಚಂದ್ರಗುತ್ತಿ ವಿಶೇಷ ಉಪನ್ಯಾಸ ನೀಡಿದರು. ತಾಪಂ ಅಧ್ಯಕ್ಷ ಪರಮೇಶ್ವರಪ್ಪ, ಸದಸ್ಯೆ ಗೀತಾ ,ಪುರಸಭಾಧ್ಯಕ್ಷೆ ರತ್ನಮ್ಮ, ಜಿಪಂ ಸದಸ್ಯ ನರಸಿಂಗನಾಯ್ಕ, ಆರುಂಧತಿ, ರೇಣುಕಮ್ಮ, ತಹಶೀಲ್ದಾರ್ ಶಿವಕುಮಾರ್, ಇಒ ಆನಂದ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಪ್ಪ, ತಾ.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ದಿನೇಶ್, ಪ್ರೌಡಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮಾಲತೇಶ್ವರ್,ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನಾಚಾರ್, ಪಾಪಯ್ಯ, ಆರ್.ಎಂ ಘಾಸಿ,ಚಂದ್ರಾನಾಯ್ಕ, ಬಿ.ಆರ್ ಮಂಜಪ್ಪ, ನಿಸಾರ್‌ಅಹ್ಮದ್ ಮತ್ತಿತರರು ಉಪಸ್ಥಿತರಿದ್ದರು.







