ರೊಹಿಂಗ್ಯಾ ವಲಸಿಗರ ಗಡಿಪಾರು: ಕಿರಣ್ ರಿಜಿಜು

ಹೊಸದಿಲ್ಲಿ, ಸೆ. 4: ಮ್ಯಾನ್ಮಾರ್‌ನಲ್ಲಿ ರೊಹಿಂಗ್ಯಾ ಮುಸ್ಲಿಮರ ಹತ್ಯಾಕಾಂಡ ನಡೆಯುತ್ತಿರುವಾಗಲೇ, ಕೇಂದ್ರ ಸರಕಾರ ಹಾಗೂ ಅಸ್ಸಾಂ ರಾಜ್ಯ ಸರಕಾರ ರೊಹಿಂಗ್ಯಾ ವಲಸಿಗರು ತಮ್ಮ ಸ್ವದೇಶ ಮ್ಯಾನ್ಮಾರ್‌ಗೆ ಮರಳುವಂತೆ ಮಂಗಳವಾರ ಸ್ಪಷ್ಟಪಡಿಸಿದೆ. ಬಿಜೆಪಿ, ಪಕ್ಷದ ಮುಖ್ಯಮಂತ್ರಿಗಳು, ಈಶಾನ್ಯ ರಾಜ್ಯಗಳ ನಾಯಕರ ಸಮಾವೇಶ ನಡೆಸಿದ ಬಳಿಕ ಈ ಪ್ರತಿಪಾದನೆ ಹೊರಬಿದ್ದಿದೆ.
ಹೊಸದಿಲ್ಲಿಯಲ್ಲಿ ಈಶಾನ್ಯ ಪ್ರಜಾಪ್ರಭುತ್ವ ಮೈತ್ರಿ ಸಭೆಯ ನೇಪಥ್ಯದಲ್ಲಿ ಮಾತನಾಡಿದ ರಾಜ್ಯ ಸಚಿವ ಕಿರಣ್ ರಿಜಿಜು, ರೊಹಿಂಗ್ಯಾ ವಲಸಿಗರು ಅನಧಿಕೃತ ವಲಸೆಗಾರರು. ಅವರನ್ನು ಕಾನೂನು ಪ್ರಕ್ರಿಯೆ ಮೂಲಕ ಗಡಿಪಾರು ಮಾಡಬೇಕು ಎಂದಿದ್ದಾರೆ.
ರೊಹಿಂಗ್ಯಾ ವಲಸಿಗರ ಗಡಿಪಾರಿಗೆ ಸೇನೆ ಬಳಸುವುದಿಲ್ಲ. ಈ ರೀತಿ ವರ್ತಿಸಿದರೆ, ನಾವು ಅಮಾನವೀಯರು ಎಂಬ ಕಳಂಕ ತಟ್ಟಬಹುದು. ನಾವು ಅದಕ್ಕೆ ಸಿದ್ಧರಿಲ್ಲ. ಭಾರತದಂತೆ ಇತರ ಯಾವುದೇ ದೇಶ ವಲಸಿಗರನ್ನು ಸ್ವೀಕರಿಸಿಲ್ಲ ಎಂದು ಅವರು ಹೇಳಿದರು.
ರೊಹಿಂಗ್ಯಾ ವಲಸಿಗರು ಹಿಂದೆ ಕಳುಹಿಸುವ ಬಗ್ಗೆ ಸರಕಾರ ಸ್ಪಷ್ಟ ನಿಲುವು ಹೊಂದಿದೆ ಎಂದು ಸಹಾಯಕ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಈಶಾನ್ಯ ರಾಜ್ಯಗಳಲ್ಲಿ ರೊಹಿಂಗ್ಯಾ ವಲಸಿಗರಿಗೆ ಸ್ಥಳವಿಲ್ಲ. ಸುಪ್ರೀಂ ಕೋರ್ಟ್ ಒಂದು ವೇಳೆ ರಾಜ್ಯ ಸರಕಾರವನ್ನು ಪ್ರಶ್ನಿಸಿದರೆ, ಆ ರಾಜ್ಯಗಳು ಇದೇ ಉತ್ತರ ನೀಡಲಿವೆ ಎಂದು ಅಸ್ಸಾಂನ ಆರೋಗ್ಯ ಸಚಿವ ಹೇಮಂತ್ ಬಿಸ್ವಾಸ್ ಶರ್ಮಾ ಹೇಳಿದ್ದಾರೆ.







