ಮೌಢ್ಯಾಚರಣೆ ಪ್ರತಿಬಂಧಕ ಕಾಯ್ದೆ ಜಾರಿ: ಸೆ.6 ರಂದು ಸರಕಾರದ ನಿರ್ಧಾರ ಪ್ರಕಟ; ರಾಮಲಿಂಗಾ ರೆಡ್ಡಿ
ಬೆಂಗಳೂರು, ಸೆ.5: ಮೌಢ್ಯಾಚರಣೆ ಪ್ರತಿಬಂಧಕ ಕಾಯ್ದೆ ಜಾರಿ ಕುರಿತು ಪ್ರಗತಿಪರ ಮಠಾಧೀಶರು ಸಲ್ಲಿಸಿರುವ ಪ್ರಸ್ತಾವನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯರೊಂದಿಗೆ ಚರ್ಚಿಸಿ ಸೆ.6 ರಂದು ಸೂಕ್ತ ನಿರ್ಧಾರ ಪ್ರಕಟಿಸಲಾಗುವುದು ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಮಂಗಳವಾರ ಪ್ರಗತಿಪರ ಪಠಾಧೀಶರು ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಮೌಢ್ಯಾಚರಣೆ ಪ್ರತಿಬಂಧಕ ಕಾಯ್ದೆ ಜಾರಿ ಕುರಿತು ಆಯೋಜಿಸಿರುವ ನಿರ್ಣಾಯಕ ಧರಣಿಗೆ ಆಗಮಿಸಿ ಮಠಾಧೀಶರು ಸಲ್ಲಿಸಿದ ಪ್ರಸ್ತಾವನೆ ಸ್ವೀಕರಿಸಿ ಮಾತನಾಡಿದ ಅವರು, ಮಠಾಧೀಶರು ಸಲ್ಲಿಸಿರುವ ಪ್ರಸ್ತಾವನೆಯ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯರೊಂದಿಗೆ ಇಂದೇ ಚರ್ಚಿಸಿ ನಾಳೆ ಸರಕಾರದ ಹಲವು ಸಚಿವರೊಂದಿಗೆ ಇಲ್ಲಿಗೆ ಆಗಮಿಸಿ ಸರಕಾರದ ನಿಲುವನ್ನು ಪ್ರಕಟಿಸುವುದಾಗಿ ತಿಳಿಸಿದರು.
ಈ ವೇಳೆ ನಿಡುಮಾಮಿಡಿ ಮಠದ ಚನ್ನಮಲ್ಲ ಸ್ವಾಮೀಜಿ ಮಾತನಾಡಿ, ನೆರೆಯ ರಾಜ್ಯವಾದ ಮಹಾರಾಷ್ಟ್ರದಲ್ಲಿ ಮೌಢ್ಯ ನಿಷೇಧ ಕಾಯ್ದೆ ಜಾರಿಯಾಗಿದೆ. ಕೇರಳದಲ್ಲೂ ಜಾರಿಗೆ ಬರುತ್ತಿದೆ. ಆದರೆ ಸಂತರು, ಶರಣರ ನಾಡದ ಕರ್ನಾಟಕದಲ್ಲಿ ಮಾತ್ರ ಯಾಕೆ ಕಾಯ್ದೆ ತರಲು ವಿಳಂಬವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಜಲ್ಲಿಕಟ್ಟುಗೆ ಸುಗ್ರೀವಾಜ್ಞೆ ತರಲು ಎಲ್ಲ ರಾಜಕೀಯ ಪಕ್ಷಗಳೂ ಒಂದಾಗುತ್ತವೆ. ಕಂಬಳದ ಬಗ್ಗೆ ಎಲ್ಲ ಪಕ್ಷಗಳು ಒಂದಾದವು. ಆದರೆ ಮೂರೂವರೆ ವರ್ಷಗಳಿಂದ ವೌಢ್ಯ ನಿಷೇಧ ಕಾಯ್ದೆಗೆ ಒತ್ತಾಯಿಸಿ ಹೋರಾಟ ಮಾಡುತ್ತಿದ್ದರೂ ಕಾಯ್ದೆ ಜಾರಿಗೆ ರಾಜಕೀಯ ಪಕ್ಷಗಳು ಆಸಕ್ತಿ ತೋರಿಸುತ್ತಿಲ್ಲ. ಹಾಗಾದರೆ ನಾಡಿನಲ್ಲಿ ಮೂಢ ನಂಬಿಕೆಯಿಂದ ಸಾಮಾನ್ಯ ಜನತೆ ತಮ್ಮ ಪ್ರಾಣ ಕಳೆದುಕೊಂಡರೆ ಜನಪ್ರತಿನಿಧಿಗಳಿಗೆ ಸಂತೋಷವೇ ಎಂದು ಅವರು ಪ್ರಶ್ನಿಸಿದರು.
ಸಿಪಿಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಮಾತನಾಡಿ, ಶರಣರ ನಾಡದ ಕರ್ನಾಟಕದಲ್ಲಿ ಮೌಢ್ಯಮುಕ್ತ ಕಾನೂನು ಜಾರಿಗೆ ಪ್ರಗತಿಪರ ಮಠಾಧೀಶರ ವೇದಿಕೆ ಮುಂದಾಗಿರುವುದು ಎಲ್ಲ ಕಾಲಕ್ಕೂ ಮಾದರಿಯಾದ ನಡೆಯಾಗಿದೆ. ಈಗಾಗಲೇ ಕೋಮುವಾದಿಗಳು ಹಾಗೂ ಮೌಢ್ಯಾಚರಣೆಯ ಪ್ರತಿಪಾದಕರು ದಾಬೋಲ್ಕರ್, ಗೋವಿಂದ ಪನ್ಸಾರೆ ಹಾಗೂ ಎಂ.ಎಂ. ಕಲಬುರ್ಗಿ ಮತ್ತಿತರರನ್ನು ಹತ್ಯೆ ಮಾಡಿದ್ದಾರೆ. ಇಂತಹ ಹತ್ಯೆಯನ್ನು ತಡೆಯಬೇಕಾದರೆ ಕೂಡಲೇ ಸರಕಾರ ಮೌಢ್ಯಮುಕ್ತ ಕಾನೂನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ವೌಢ್ಯಾಚರಣೆ ಪ್ರತಿಬಂಧಕ ಕಾಯ್ದೆ ಜಾರಿ ಮಾಡದಿದ್ದರೆ ನಾನು ಸ್ವಯಂ ಬಂಧನಕ್ಕೆ ಒಳಗಾಗುತ್ತೇನೆ. ಆದರೆ, ಹೋರಾಟವನ್ನು ಮಾತ್ರ ನಿಲ್ಲಿಸುವುದಿಲ್ಲ. ನನ್ನ ಹೋರಾಟಕ್ಕೆ ಪ್ರಗತಿಪರರ ಹೊರಗಿನಿಂದ ಬೆಂಬಲಿಸಲಿ.
-ಚನ್ನಮಲ್ಲ ಸ್ವಾಮೀಜಿ, ನಿಡುಮಾಮಿಡಿ ಮಠ







