ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ

ಬೆಂಗಳೂರು, ಸೆ.5: ಹಿರಿಯ ಪತ್ರಕರ್ತೆ, ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಅವರ ಮೇಲೆ ಮಂಗಳವಾರ ರಾತ್ರಿ ದುಷ್ಕರ್ಮಿಗಳ ತಂಡ ಗುಂಡಿನ ದಾಳಿ ಮಾಡಿ ಹತ್ಯೆಗೈದಿದ್ದಾರೆ.
ಮಂಗಳವಾರ ರಾತ್ರಿ 8.15ರ ಸುಮಾರಿಗೆ ರಾಜರಾಜೇಶ್ವರಿ ನಗರದ ಗೌರಿ ಲಂಕೇಶ್ ಅವರ ನಿವಾಸದಲ್ಲಿ ಹತ್ಯೆಯಾಗಿದ್ದು, ಮೂವರು ದುಷ್ಕರ್ಮಿಗಳ ತಂಡದಲ್ಲಿ, ಇಬ್ಬರು ಅವರನ್ನು ಹಿಂಬಾಲಿಸಿ ಬಂದರೆ, ಮನೆಯ ಬಳಿ ಮತ್ತೊಬ್ಬ ಕಾಯುತ್ತಿದ್ದು, ಗೌರಿ ಅವರು ಕಾರು ಇಳಿದು ಬಾಗಿಲ ಬಳಿ ಹೋಗುತ್ತಿದ್ದಂತೆ, ಗೌರಿ ಅವರ ಮೇಲೆ ಏಳು ಸುತ್ತು ಗುಂಡು ಹಾರಿಸಿ ಕೊಲೆಗೈದಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಬೈಕ್‌ನಲ್ಲಿದ್ದ ಬಂದಿದ್ದ ದುಷ್ಕರ್ಮಿಗಳು ಗೌರಿ ಲಂಕೇಶ್ ಅವರ ಎದೆ ಭಾಗಕ್ಕೆ ಎರಡು ಗುಂಡು ಸೇರಿ ಹಣೆ ಮತ್ತು ದೇಹಕ್ಕೆ ನಾಲ್ಕು ಗುಂಡು ಹಾರಿಸಿದ್ದಾರೆ. ಮನೆ ಗೋಡೆಗೆ ಮೂರು ಗುಂಡುಗಳು ತಾಕಿವೆ. ಗುಂಡಿನ ದಾಳಿಯಿಂದ ತೀವ್ರಗಾಯಗೊಂಡ ಗೌರಿ ಸ್ಥಳದಲ್ಲಿಯೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಘಟನೆ ಸಂಬಂಧ ಸ್ಥಳಕ್ಕೆ ಧಾವಿಸಿದ ಆರ್‌ಆರ್ ನಗರ ಠಾಣೆ ಪೊಲೀಸರು ಗೌರಿ ಲಂಕೇಶ್ ಅವರ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗಾಗಿ ನಗರದ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಮನೆಯ ಹೊರಗಡೆ ಕೊಲೆ: ರಾತ್ರಿ 7.30ರ ಸುಮಾರಿಗೆ ಬಸವನಗುಡಿಯಲ್ಲಿರುವ ಪತ್ರಿಕೆ ಕಚೇರಿಯಿಂದ ಮನೆಗೆ ಹೊರಟ ಗೌರಿ ಲಂಕೇಶ್, ಆರ್‌ಆರ್ ನಗರದ ನಿವಾಸಕ್ಕೆ ಕಾರಿನಲ್ಲಿ ಬಂದು, ಮನೆಯ ಬಾಗಿಲು ತೆಗೆಯುವ ವೇಳೆ ಏಕಾಏಕಿ ಮೂವರು ದುಷ್ಕರ್ಮಿಗಳು ಪಿಸ್ತೂಲು ತೆಗೆದು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಅನುಚೇತ್ ತಿಳಿಸಿದ್ದಾರೆ.
ಜೀವ ಬೆದರಿಕೆ: ತಿಂಗಳ ಹಿಂದೆ ಜೀವಬೆದರಿಕೆ ಬಗ್ಗೆ ಆಪ್ತರ ಜೊತೆ ಪತ್ರಕರ್ತೆ ಗೌರಿ ಲಂಕೇಶ್ ಅವರು ಹಂಚಿಕೊಂಡಿದ್ದರು ಎನ್ನಲಾಗಿದ್ದು, ನನಗೆ ಯಾರೋ ಕರೆ ಮಾಡಿ ನಿನ್ನನ್ನು ಉಳಿಸಲ್ಲ ಸಾಯಿಸುತ್ತೇವೆ ಅಂತಾ ಹೇಳ್ತಾನೆ ಇದ್ದಾರೆ ಅಂತ ಬೆದರಿಕೆ ಕರೆ ಬಗ್ಗೆ ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್ ಅವರೊಂದಿಗೆ ಹಂಚಿಕೊಂಡಿದ್ದರು ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಸಚಿವರ ಭೇಟಿ: ಘಟನೆ ನಡೆದ ರಾಜರಾಜೇಶ್ವರಿನಗರದ ಗೌರಿ ಲಂಕೇಶ್ ಅವರ ನಿವಾಸಕ್ಕೆ ಗೃಹ ಸಚಿವ ರಾಮಲಿಂಗಾರೆಡ್ಡಿ, ನಗರ ಪೊಲೀಸ್ ಆಯುಕ್ತ ಟಿ.ಸುನೀಲ್‌ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿ ತಂಡ ಭೇಟಿ ನೀಡಿ, ಗೌರಿ ಲಂಕೇಶ್ ಅವರ ಮನೆಯನ್ನು ತಪಾಸಣೆ ನಡೆಸಿದರು. ಬಳಿಕ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದರು.
ಸೆ.6 ರಂದು ಮರಣೋತ್ತರ ಪರೀಕ್ಷೆ: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಪಾರ್ಥಿವ ಶರೀರದ ಮರಣೋತ್ತರ ಪರೀಕ್ಷೆ ಸೆ.6 ಬುಧವಾರ ನಡೆಯಲಿದೆ ಎಂದು ನಗರದ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಮೂಲಗಳು ತಿಳಿಸಿವೆ.
ತನಿಖೆಗೆ ಮೂರು ತಂಡ ರಚನೆ: ಗೌರಿ ಲಂಕೇಶ್ ಹತ್ಯೆಯಾಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ನಗರ ಪೊಲೀಸ್ ಕಮಿಷನರ್ ಸುನೀಲ್ ಕುಮಾರ್, ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಘಟನೆಯು ಪಕ್ಕದ ಮನೆಯವರಿಗೆ ಪೊಲೀಸರಿಗೆ ತಿಳಿದಿದ್ದು, ತಕ್ಷಣ ಧಾವಿಸಿದ ಪೊಲೀಸರಿಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೃತದೇಹ, ಸುತ್ತ ನಾಲ್ಕು ಗುಂಡುಗಳು ಸಿಕ್ಕಿವೆ. ತನಿಖೆಗಾಗಿ ಪೊಲೀಸ್ ಅಧಿಕಾರಿಗಳ ಮೂರು ತಂಡವನ್ನು ರಚಿಸಲಾಗಿದ್ದು, ಸ್ಥಳಕ್ಕೆ ಬೆರಳಚ್ಚು ತಜ್ಞರು ಆಗಮಿಸಿದ್ದಾರೆ. ಮನೆಯಲ್ಲಿ ಸಿಸಿ ಟಿವಿ ಕ್ಯಾಮರಾವಿದ್ದು, ಅದನ್ನು ತನಿಖೆಯ ವೇಳೆ ಪರಿಶೀಲಿಸಲಾಗುವುದು ಎಂದು ಹೇಳಿದರು.
ವಿಚಾರವಾದಿ, ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ದುಃಖ ತಂದಿದೆ. ಕೊಲೆಗಡುಕರನ್ನು ತೀವ್ರಗತಿಯಲ್ಲಿ ಪತ್ತೆ ಹಚ್ಚಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆರೋಪಿಗಳ ಪತ್ತೆಗೆ ಮೂರು ತಂಡಗಳನ್ನು ಪೊಲೀಸ್ ಇಲಾಖೆ ರಚಿಸಲಾಗಿದೆ. ಪೊಲೀಸರಿಂದ ಪ್ರಥಮ ವರದಿ ಬಂದ ಬಳಿಕ ಸೂಕ್ತ ತನಿಖೆ ನಡೆಸಲು ಸೂಚಿಸಲಾಗುವುದು. ಎಂ.ಎಂ. ಕಲಬುರ್ಗಿ ಮತ್ತು ಗೌರಿ ಲಂಕೇಶ್ ಅವರ ಹತ್ಯೆದಲ್ಲಿ ಸಾಮ್ಯತೆ ಇದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ.
-ಸಿದ್ದರಾಮಯ್ಯ, ಮುಖ್ಯಮಂತ್ರಿ
ಗೌರಿ ಲಂಕೇಶ್ ಅವರ ಹತ್ಯೆ ಅಪಾರ ನೋವು ತಂದಿದೆ. ಪೈಶಾಚಿಕ, ವಿಕೃತ ಮನಸ್ಸಿನ ಘೋರ ಕೃತ್ಯ. ಅಪರೂಪದ ಮಹಿಳಾ ಹೋರಾಟಗಾರ್ತಿಯನ್ನು ಕೊಲೆಗೈದವರಿಗೆ ಉಗ್ರ ಶಿಕ್ಷೆ ಆಗಬೇಕು.
-ಉಮಾಶ್ರೀ, ಕನ್ನಡ ಮತ್ತು ಸಂಸ್ಕೃತಿ ಸಚಿವೆ
ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಲಾದ ಸುದ್ದಿ ಕೇಳಿ ತೀವ ಆಘಾತ ತಂದಿದೆ. ಇದು ಒಪ್ಪಲಾದಂತಹ ನೀಚ, ಖಂಡನೀಯ ಹೇಯಕೃತ್ಯ. ಕೂಡಲೆ ಹಂತಕರನ್ನು ಬಂಧಿಸಲು ಸರಕಾರ ಎಲ್ಲ ಪ್ರಯತ್ನಗಳನ್ನು ಮಾಡಬೇಕು.
-ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ
ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಹತ್ಯೆ ಖಂಡನೀಯ. ಸೈದ್ಧಾಂತಿಕ ಆಧಾರದ ಮೇಲೆ ಅಥವಾ ವೈಯಕ್ತಿಕ ಕಾರಣಗಳಿಂದ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿರಬಹುದು. ಈ ಹಿಂದೆ ಯಾವುದೇ ಬೆದರಿಕೆಗಳು ಬಂದಿರಲಿಲ್ಲ ಎಂಬ ಮಾಹಿತಿ ಇದೆ. ತನಿಖೆ ಬಳಿಕ ಸತ್ಯಾಸತ್ಯತೆ ಹೊರಬೀಳಲಿದೆ.
-ರಾಮಲಿಂಗಾರೆಡ್ಡಿ, ಗೃಹಸಚಿವ
ಸಾಹಿತಿ ಕಲಬುರ್ಗಿ ಹತ್ಯೆ ನಡೆದು ಎರಡು ವರ್ಷಗಳಲ್ಲಿ ಮತ್ತೊಂದು ಸಂಗಾತಿಯನ್ನು ಕಳೆದುಕೊಂಡಿದ್ದೇವೆ. ಗೌರಿ ಲಂಕೇಶ್ ಕಣ್ಣಮುಂದೆ ಬೆಳದ ಮಗಳು. ಇದು ವೈಚಾರಿಕತೆಯ ಹಿನ್ನೆಲೆಯಲ್ಲಿ ನಡೆದಿರುವ ಹತ್ಯೆ ಎಂದು ಯಾರಾದರೂ ಊಹೆ ಮಾಡಬಹುದು.
-ಚಂದ್ರಶೇಖರ್ ಪಾಟೀಲ್, ಚಿಂತಕ
ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಪ್ರಜಾಪ್ರಭುತ್ವದ ಹತ್ಯೆಯಾಗಿದ್ದು, ಈ ಹತ್ಯೆಯನ್ನು ಮೂಲಭೂತವಾದಿಗಳು ಮಾಡಿದ್ದಾರೆ. ಇದರಿಂದ, ಕರ್ನಾಟಕವೇ ಬೆಚ್ಚಿ ಬೀಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ತಪ್ಪಿತಸ್ಥರನ್ನು ಬಂಧಿಸಿ ಶಿಕ್ಷಿಸುವ ಕೆಲಸವಾಗಬೇಕು.
-ಕೆ.ಎಲ್.ಅಶೋಕ್ , ಪ್ರಧಾನ ಕಾರ್ಯದರ್ಶಿ, ಕೋಮು ಸೌಹಾರ್ದ ವೇದಿಕೆ
ಪತ್ರಕರ್ತೆ ಗೌರಿ ಲಂಕೇಶ್ ಅವರು ಸಮಾನತೆಗಾಗಿ ಹೋರಾಡಿದವರು. ಆದರೆ, ಕೋಮುವಾದಿಗಳು ಈ ಹತ್ಯೆಯನ್ನು ಮಾಡಿದ್ದು, ಕರ್ನಾಟಕ ಸರಕಾರ ಈ ದುಷ್ಕರ್ಮಿಗಳನ್ನು ಬಂಧಿಸಲು ಕ್ರಮ ಕೈಗೊಳ್ಳಬೇಕು. ಎಂ.ಎಂ.ಕಲಬುರ್ಗಿ ಅವರ ಹತ್ಯೆಯಂತೆಯೇ ಈ ಹತ್ಯೆಯೂ ನಡೆದಿದ್ದು, ಈ ಹತ್ಯೆಯನ್ನು ಪ್ರತಿಯೊಬ್ಬರೂ ಖಂಡಿಸಬೇಕು.
-ಕೆ.ನೀಲಾ , ಹೋರಾಟಗಾರ್ತಿ
ಗೌರಿ ಲಂಕೇಶ್ ಅವರನ್ನು ಫ್ಯಾಶಿಸ್ಟ್ ಶಕ್ತಿಗಳು ಹತ್ಯೆ ಮಾಡಿದ್ದು, ಫ್ಯಾಶಿಸ್ಟ್‌ಗಳು, ಕೋಮುವಾದಿಗಳು ಈ ದೇಶವನ್ನು ನರಕ ಮಾಡುತ್ತಿದ್ದಾರೆ. ಈ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ, ವೈಚಾರಿಕತೆಗೆ ಬೆಲೆ ಇಲ್ಲದಂತಾಗಿದೆ. ಅಲ್ಲದೆ, ಹೆಣ್ಣು ಮಗಳನ್ನು ಹತ್ಯೆ ಮಾಡಿರುವುದನ್ನು ಖಂಡಿಸುತ್ತೇನೆ.
-ಎಸ್.ಜಿ.ಸಿದ್ದರಾಮಯ್ಯ, ಹಿರಿಯ ಸಾಹಿತಿ
ಗೌರಿ ಲಂಕೇಶ್ ಅವರು ಪ್ರಾಮಾಣಿಕ ದಿಟ್ಟ ಪತ್ರಕರ್ತೆಯಾಗಿದ್ದರು. ಆದರೆ, ಇವರ ವೈಚಾರಿಕ ಬರಹ, ಚಿಂತನೆಗಳನ್ನು ಒಪ್ಪದ ಕೋಮುವಾದಿಗಳು ಇವರನ್ನು ಹತ್ಯೆಗೈದಿದ್ದಾರೆ. ಅಲ್ಲದೆ, ದುಷ್ಕರ್ಮಿಗಳು ನನ್ನನ್ನು ಕೂಡ ಹತ್ಯೆ ಮಾಡಲು ಯತ್ನಿಸಿದ ಬಳಿಕ ನಾನು ಪೊಲೀಸರ ಭದ್ರತೆಯನ್ನು ಪಡೆದಿದ್ದೆ. ಆದರೆ, ತಮಗಿಂತಲೂ ಚಿಕ್ಕವರಾದ ಗೌರಿ ಅವರನ್ನು ಹತ್ಯೆಗೈದಿರುವುದನ್ನು ತಾವು ಖಂಡಿಸುತ್ತೇವೆ.
-ನರೇಂದ್ರ ನಾಯಕ್ , ವಿಚಾರವಾದಿ







