ಕೆ.ಜೆ.ಜಾರ್ಜ್ ರಾಜೀನಾಮೆಗೆ ಎರಡು ದಿನ ಗಡುವು: ಯಡಿಯೂರಪ್ಪ
.jpg)
ಬೆಂಗಳೂರು, ಸೆ.5: ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದ ಕುರಿತು ಸುಪ್ರೀಂಕೋರ್ಟ್ ಸಿಬಿಐ ತನಿಖೆಗೆ ಆದೇಶಿಸಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಕೂಡಲೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಒತ್ತಾಯಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾರ್ಜ್ ಅವರಿಂದ ರಾಜೀನಾಮೆ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಎರಡು ದಿನಗಳ ಗಡುವು ನೀಡುತ್ತಿದ್ದೇವೆ. ಅವರು ರಾಜೀನಾಮೆ ಪಡೆಯದಿದ್ದರೆ, ರಾಜ್ಯಾದ್ಯಂತ ಸರಕಾರದ ವಿರುದ್ಧ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸುಪ್ರೀಂಕೋರ್ಟ್ ನೀಡಿರುವ ಆದೇಶದ ಪ್ರತಿ ಇನ್ನೂ ಕೈ ಸೇರಿಲ್ಲ ಎಂದು ಮುಖ್ಯಮಂತ್ರಿ ಹೇಳುತ್ತಿದ್ದಾರೆ. ಎಲ್ಲ ಮಾಧ್ಯಮಗಳಲ್ಲೂ ಈ ಸಂಬಂಧ ಸುದ್ದಿ ಪ್ರಸಾರವಾಗುತ್ತಿದೆ. ಈಗ ರಾಜೀನಾಮೆ ಪಡೆಯಲು ತಡ ಮಾಡುತ್ತಿರುವುದೇಕೆ, ಮೊದಲು ಜಾರ್ಜ್ ರಾಜೀನಾಮೆ ತೆಗೆದುಕೊಳ್ಳಲಿ ಎಂದು ಯಡಿಯೂರಪ್ಪ ಆಗ್ರಹಿಸಿದರು.
ಈ ಪ್ರಕರಣದಲ್ಲಿ ಜಾರ್ಜ್ ವಿರುದ್ಧ ಆರೋಪ ಕೇಳಿ ಬಂದಾಗಲೆ ಬಿಜೆಪಿ, ಸಿಬಿಐ ತನಿಖೆಗೆ ಒತ್ತಾಯಿಸಿತ್ತು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಜಾರ್ಜ್‌ರನ್ನು ಕಾಪಾಡಿದರು. ಸಿಐಡಿ ಮೂಲಕ ಅವರಿಗೆ ಕ್ಲೀನ್‌ಚಿಟ್ ಕೊಡಿಸಿದರು. ಇಂದು ಸುಪ್ರೀಂಕೋರ್ಟ್ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿದೆ. ಪ್ರಕರಣದ ಸತ್ಯಾಸತ್ಯತೆ ಈಗ ಹೊರಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.







