ರಾಜ್ಯಜ್ಯೂನಿಯರ್, ಸೀನಿಯರ್ ಅಥ್ಲೆಟಿಕ್ಸ್: ಐದು ಹೊಸ ಕೂಟ ದಾಖಲೆ; ಆಳ್ವಾಸ್ ಸ್ಪೋಟ್ಸ್ ಕ್ಲಬ್ ಮುನ್ನಡೆ

ಮೂಡುಬಿದಿರೆ, ಸೆ. 5: ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ನಡೆಯುತ್ತಿರುವ ರಾಜ್ಯ ಜೂನಿಯರ್ ಮತ್ತು ಸೀನಿಯರ್ ಅಥ್ಲೆಟಿಕ್ಸ್‌ನ ಎರಡನೇ ದಿನ ಒಟ್ಟು ಐದು ಹೊಸ ಕೂಟ ದಾಖಲೆಗಳಾಗಿವೆ.
ಮೂಡುಬಿದಿರೆಯ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್ ಎರಡು ದಿನಗಳಲ್ಲಿ 6 ಕೂಟ ದಾಖಲೆಗಳನ್ನು ಗಳಿಸಿದೆ.
48 ಚಿನ್ನ, 37 ಬೆಳ್ಳಿ, 35 ಕಂಚಿನ ಸಹಿತ ಒಟ್ಟು 120 ಪದಕಗಳನ್ನು ಗಳಿಸಿರುವ ಆಳ್ವಾಸ್ ಸಮಗ್ರವಾಗಿ ಮುನ್ನಡೆಯನ್ನು ಸಾಧಿಸಿದೆ.
18 ವರ್ಷದೊಳಗಿನ ಹುಡುಗಿಯರ ವಿಭಾಗದ ಹ್ಯಾಮರ್ ತ್ರೋನಲ್ಲಿ ಮೈಸೂರು ಡಿವೈಇಎಸ್‌ನ ಹರ್ಷಿತಾ 42.60ಮೀ ಎಸೆದು, 2008ರಲ್ಲಿ ವನಿತಾ ರಾಥೋಡ್ ಮಾಡಿದ್ದ 41.45 ಮೀಟರ್ ದಾಖಲೆಯನ್ನು ಹಿಂದಿಕ್ಕಿದ್ದಾರೆ.
18 ವರ್ಷದೊಳಗಿನ ಬಾಲಕರ 400ಮೀ ಓಟದಲ್ಲಿ ಬೆಂಗಳೂರಿಗೆ ಅರ್ಜುನ್ ಟ್ರ್ಯಾಕ್ ಎಂಡ್ ಫೀಲ್ಡ್ ಸಂಸ್ಥೆಯ ನಿಹಾಲ್ ಜೊಯಲ್ 48.70 ಸೆಕೆಂಡ್ಸ್ ಕ್ರಮಿಸುವುದರೊಂದಿಗೆ ಸಾಧನೆ ಮಾಡಿದ್ದು, 2000ದಲ್ಲಿ ಶಶಿಧರ್ ಮಾಡಿದ್ದ 49.2 ದಾಖಲೆಯನ್ನು ಹಿಂದಿಕ್ಕಿದ್ದಾರೆ. 16 ವರ್ಷದೊಳಗಿನ ಬಾಲಕರ ವಿಭಾಗದ ಶಾಟ್‌ಪುಟ್‌ನಲ್ಲಿ 14.55 ಎಸೆದು ಆಳ್ವಾಸ್‌ನ ನಾಗೇಂದ್ರ ಅಣ್ಣಪ್ಪ ನಾಯ್ಕಾ ಹಾಗೂ 20 ವರ್ಷದೊಳಗಿನ ಹುಡುಗರ ವಿಭಾಗದ 1,500 ಮೀ ಓಟದಲ್ಲಿ ಬೆಂಗಳೂರು ಅಥ್ಲೆಟಿಕ್ಸ್ ಅಸೋಶಿಯಶನ್‌ನ ಈರಪ್ಪ ಹಲಗಣ್ಣ ಕೂಟ ದಾಖಲೆಯನ್ನು ಮಾಡಿದ್ದಾರೆ.
ಆಳ್ವಾಸ್‌ನ ರಿನ್ಸ್ ಜೋಸೆಫ್ 16 ವರ್ಷದೊಳಗಿನ ಬಾಲಕರ 400 ಮೀ. ಓಟದಲ್ಲಿ 50.6 ಸೆಕೆಂಡ್ಸ್ ಕ್ರಮಿಸಿ ನೂತನ ಕೂಟ ದಾಖಲೆ ಮಾಡಿದ್ದಾರೆ.







