ಬೈಕ್ ರ್ಯಾಲಿಗೆ ಅವಕಾಶ ನಿರಾಕರಣೆ: ಜಿಲ್ಲಾ ಕಾಂಗ್ರೆಸ್ ಸಮರ್ಥನೆ
ಮಂಗಳೂರು, ಸೆ.5: ಬಿಜೆಪಿ ಮತ್ತು ಸಂಘ ಪರಿವಾರದವರು ಆಯೋಜಿಸಿರುವ ಬೈಕ್ ರ್ಯಾಲಿಗೆ ಜಿಲ್ಲಾಡಳಿತ ಅವಕಾಶ ನಿರಾಕರಿಸಿರುವುದು ಸರಿಯಾದ ಕ್ರಮವಾಗಿದೆ ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇಂದಿನ ದಿನಗಳಲ್ಲಿ ದ.ಕ.ಜಿಲ್ಲೆಯನ್ನು ಕೇಂದ್ರವಾಗಿರಿಸಿ ಕೋಮುವಾದಿ ಸಂಘಟನೆಗಳು ಶಾಂತಿ ಕದಡುವ ಹುನ್ನಾರ ನಡೆಸುತ್ತಿರುವುದರಿಂದ ಜಿಲ್ಲೆಯ ಶಾಂತಿ ಪ್ರಿಯ ನಾಗರಿಕರಲ್ಲಿ ಬೇಸರ ಮೂಡಿಸಿದೆ. ಎರಡು ವರ್ಷಗಳಲ್ಲಿ ಈ ಜಿಲ್ಲೆಯಲ್ಲಿ ಪ್ರವೀಣ್ ಪೂಜಾರಿ, ಕಾರ್ತಿಕ್ ರಾಜ್, ಹರೀಶ್ ಪೂಜಾರಿ, ವಿನಾಯಕ ಬಾಳಿಗ, ಪ್ರತಾಪ್ ಪೂಜಾರಿ, ಅಶ್ರಫ್ ಕಲಾಯಿ, ಶರತ್ ಮಡಿವಾಳರ ಹತ್ಯೆಗಳಾಗಿದ್ದು, ಇವು ಕೋಮುದ್ವೇಷಗಳಿಂದ ಕೂಡಿರುವುದರಿಂದ ಮತ್ತು ಜಿಲ್ಲೆಯಲ್ಲಿ ಶಾಂತಿ ಸಾಮರಸ್ಯಕ್ಕೆ ಧಕ್ಕೆಯಾಗಿರುವುದರಿಂದ ಇಂತಹ ಬೈಕ್ ರ್ಯಾಲಿಗಳನ್ನು ನಿಷೇಧಿಸಿರುವುದು ಸರಿಯಾದ ಕ್ರಮವಾಗಿದೆ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈಯ ನೇತೃತ್ವದಲ್ಲಿ ನಡೆದ ಶಾಂತಿ ಸಭೆಯನ್ನು ಬಿಜೆಪಿ ಬಹಿಷ್ಕರಿಸಿರುವ ಹಿಂದಿನ ಮರ್ಮವೇನು?. ಬಂಟ್ವಾಳದಲ್ಲಿ ಸೆಕ್ಷನ್ ಜಾರಿಯಾಗಿದ್ದ ಸಂದರ್ಭ ಕಾನೂನು ಉಲ್ಲಂಘಿಸಿ ರ್ಯಾಲಿ ನಡೆಸಿ ಕಾನೂನನ್ನು ಬಿಜೆಪಿ ಗೌರವಿಸುವುದಿಲ್ಲ ಎಂಬ ಸಂದೇಶ ರವಾನಿಸಿದೆ. ಓರ್ವನ ಹತ್ಯೆಯ ಕುರಿತು ನಡೆದ ರ್ಯಾಲಿಯಲ್ಲಿ ಸಂಭ್ರಮಾಚರಣೆ ನಡೆಸಿರುವುದು ಯಾವ ಧರ್ಮ?.
ಇದರಲ್ಲಿ ಕಾನೂನು ರೂಪಿಸುವ ಸಂಸದರುಗಳೇ ಪಾಲ್ಗೊಂಡು ಕಾನೂನನ್ನು ಕೈಗೆತ್ತಿಕೊಂಡಿದ್ದು ಚುನಾಯಿತ ಪ್ರತಿನಿಧಿಗಳಿಗೆ ಮಾಡಿದ ಅವಮಾನವಲ್ಲವೇ? ಶರತ್ ಮಡಿವಾಳರ ಪಾರ್ಥಿವ ಶರೀರದ ಮೆರವಣಿಗೆ ನಡೆಸಿ ಸಂಘ ಪರಿವಾರ ಮತ್ತು ಯುವಮೋರ್ಚಾದ ಪದಾಧಿಕಾರಿಗಳು ಕಲ್ಲು ತೂರಾಟ ನಡೆಸಿ ಮುಸ್ಲಿಮರ ತಲೆಗೆ ಕಟ್ಟುವ ಪ್ರಯತ್ನ ನಡೆಸಿ ಸಿ.ಸಿ.ಕ್ಯಾಮೆರಾದಲ್ಲಿ ಸಿಕ್ಕಿ ಬಿದ್ದು ನಗೆಪಾಟಲಿಗೀಡಾಗಿಲ್ಲವೇ? ಎಂದು ಪ್ರಶ್ನಿಸಿರುವ ಹರೀಶ್ ಕುಮಾರ್ ಬಿಜೆಪಿಗರ ನಿಜಬಣ್ಣ ಬಯಲಾಗಿದ್ದು ಇದೆಲ್ಲಾ ಕೋಮು ಘರ್ಷಣೆ ನಡೆಸಿ ಮತಗಳಿಸುವ ತಂತ್ರವೆಂಬುದು ಪ್ರಜ್ಞಾವಂತ ನಾಗರಿಕರಿಗೆ ಮನವರಿಕೆಯಾಗಿದೆ ಎಂದು ತಿಳಿಸಿದ್ದಾರೆ.
ಬಿಜೆಪಿ ರ್ಯಾಲಿ ನಡೆಸುವುದಾದರೆ ಜಿಲ್ಲಾ ವ್ಯಾಪ್ತಿಗೆ ಒಳಪಟ್ಟು ನಡೆಸಲಿ. ರಾಜ್ಯಾದ್ಯಂತ ಬೈಕ್ ರ್ಯಾಲಿಯೊಂದಿಗೆ ಜನರನ್ನು ಕರೆತಂದು ಜಿಲ್ಲೆಯಲ್ಲಿ ಶಾಂತಿ ಕದಡುವ ತಂತ್ರ ಬೇಡ. ಇಂತಹ ರ್ಯಾಲಿಯಿಂದಾಗಿ ಬೇರೆ ಬೇರೆ ಜಿಲ್ಲೆಗಳಿಂದ ರ್ಯಾಲಿ ಬರುವಾಗ ವಾಹನ ಸಂಚಾರಕ್ಕೆ ತೊಡಕುಂಟಾಗುತ್ತದೆ ಹಾಗೂ ರಾಜ್ಯಾದ್ಯಂತ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಕೆಲಸ ಸರಕಾರಕ್ಕೆ ದುಬಾರಿಯಾಗಲಿದೆ. ಎಲ್ಲಿಯಾದರೂ ಕಿಡಿಗೇಡಿಗಳು ರ್ಯಾಲಿಗೆ ತೊಂದರೆ ಉಂಟು ಮಾಡಿದಲ್ಲಿ ಅಥವಾ ಯುವ ಮೋರ್ಚಾದ ಸದಸ್ಯರೇ ಕಲ್ಲು ತೂರಾಟ ನಡೆಸಿದ ಇತಿಹಾಸ ಇರುವಾಗ ಮತ್ತೆ ಮರುಕಳಿಸಿದರೆ ಸರಕಾರ ಜವಾಬ್ದಾರಿ ಆಗುವುದರಿಂದ ರ್ಯಾಲಿಗೆ ಅವಕಾಶ ನೀಡದಿರುವ ಪೋಲಿಸ್ ಇಲಾಖೆ ಹಾಗೂ ದಂಡಾಧಿಕಾರಿಯವರ ತೀರ್ಮಾನ ಸಮಂಜಸವಾಗಿದೆ ಎಂದು ತಿಳಿಸಿದ್ದಾರೆ.
ನಾಝಿ ಸಿದ್ಧಾಂತವನ್ನು ಬಿಜೆಪಿ ಹಿರಿಯ ನಾಯಕರೇ ಅಳವಡಿಸಿಕೊಂಡಿದ್ದು, ಆರೆಸ್ಸೆಸ್ ಕೂಡಾ ಇದಕ್ಕೆ ಹೊರತಾಗಿಲ್ಲ. ಹೀಗಿರುವಾಗ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈಯವರನ್ನು ನಾಝಿ ಸಿದ್ಧಾಂತದವರೆಂದು ದೂರುವ ಬಿಜೆಪಿಯವರು ಚರಿತ್ರೆಯನ್ನು ಸರಿಯಾಗಿ ಓದಿ ತಿಳಿದುಕೊಳ್ಳಲಿ ಎಂದು ತಿಳಿಸಿದ್ದಾರೆ.







