ರಾಷ್ಟ್ರೀಯ ಪಕ್ಷಗಳು ಯುವಶಕ್ತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ: ಎಚ್.ಡಿ. ದೇವೇಗೌಡ

ದಾವಣಗೆರೆ, ಸೆ.5: ಮಂಗಳೂರಿನಲ್ಲಿ ಸಾಮರಸ್ಯ ಕಾಪಾಡಬೇಕಾದ ಪಕ್ಷಗಳೇ ಶಾಂತಿ, ಸಾಮರಸ್ಯ ಕದಡುವ ಕೆಲಸ ಮಾಡುತ್ತಾ ಯುವಶಕ್ತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಆರೋಪಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡೂ ರಾಷ್ಟ್ರೀಯ ಪಕ್ಷಗಳು ಅಭಿವೃದ್ಧಿ ಬಗ್ಗೆ ಚಿಂತಿಸದೆ ಯುವಶಕ್ತಿ ದುರ್ಬಳಕೆ ಮಾಡಿಕೊಂಡು ಮಂಗಳೂರಿನಲ್ಲಿ ಶಾಂತಿ ಕದಡುವುದಕ್ಕೆ ಪೈಪೋಟಿಗೆ ಬಿದ್ದಂತಾಗಿರುವುದು ನನಗೆ ಅರ್ಥವಾಗುತ್ತಿಲ್ಲ. ಹಿಂಸಾಚಾರ ಶಮನ ಮಾಡುವ ಬದಲಿಗೆ, ಯುವಶಕ್ತಿ ದುರ್ಬಳಕೆ ಮಾಡಿಕೊಳ್ಳುತ್ತಿವೆ. ಉಭಯ ಪಕ್ಷಗಳೂ ಇದರ ದುಷ್ಪರಿಣಾಮವನ್ನೂ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ಹಿಂದೆ ಜೆ.ಎಚ್. ಪಟೇಲ್ ತಮ್ಮ ಕೊನೆಯ ದಿನಗಳಲ್ಲಿ ಕಾಂಗ್ರೆಸ್ ಪಕ್ಷವು ಪೆಟ್ರೋಲ್ ಸುರಿದರೆ, ಬಿಜೆಪಿ ಬೆಂಕಿ ಹಚ್ಚುತ್ತದೆಂಬ ಮಾತು ಹೇಳಿದ್ದು ಗಮನಾರ್ಹ ಎಂದರು.
ಬಿಕ್ಸ್ ಸಮ್ಮೇಳನದಲ್ಲಿ ಭಯೋತ್ಪಾದನೆ ಕುರಿತು ಚರ್ಚಿಸಲಾಗುತ್ತಿದೆ. ಆದರೆ ಉತ್ತರಕೋರಿಯಾ ದೇಶವನ್ನು ಆತಂಕವಾದಿ ಎಂದು ಅಮೇರಿಕಾ ಹೇಳಿದೆ. ವಿಶ್ವದಲ್ಲಿ ಶಾಂತಿ ಕದಡಲು ಉತ್ತರ ಕೋರಿಯಾ ಮುಂದಿದೆ. ಈ ಎರಡು ದೇಶಗಳ ಸಮಸ್ಯೆಗಳ ಕುರಿತು ವಿಶ್ವಸಂಸ್ಥೆಯಲ್ಲಿ ಚರ್ಚೆಯಾಗಬೇಕು ಎಂದ ಅವರು, ಮಂಗಳೂರಿಗೆ ಬಿಜೆಪಿ ಯಾವ ಪುರುಷಾರ್ಥಕ್ಕೆ ಬೈಕ್ ರ್ಯಾಲಿ ಹಮ್ಮಿಕೊಂಡಿದೆ. ಅಲ್ಲಿ ಶಾಂತಿ ಕದಡುವ ಕೆಲಸ ಸಾಗಿದೆ. ರಾಜ್ಯದಲ್ಲಿ ಈಚಿನ ಅಹಿತಕರ ಘಟನೆಗಳು ಶಾಂತಿ, ಸುವ್ಯವಸ್ಥೆಗೆ ಭಂಗ ತರುವಂತಿವೆ. ಶಾಂತಿ, ಸಾಮರಸ್ಯ ಕಾಪಾಡಲು ಶ್ರಮಿಸಬೇಕೆ ಹೊರತು, ಸ್ಪರ್ಧೆಗೆ ಬೀಳಬಾರದು ಎಂದು ಆಡಳಿತ, ವಿಪಕ್ಷಕ್ಕೆ ದೇವೇಗೌಡ ಕಿವಿಮಾತು ಹೇಳಿದರು.
ಈ ಸಂದರ್ಭ ಮುಖಂಡರಾದ ಜಫರುಲ್ಲಾಖಾನ್, ಶಾಸಕ ಹೆಚ್.ಎಸ್. ಶಿವಶಂಕರ್, ರಮೇಶ್‍ಬಾಬು, ಚಿದಾನಂದಪ್ಪ, ಹೊದಿಗೆರೆ ರಮೇಶ್, ಹೆಚ್.ಸಿ.ನೀರಾವರಿ, ಹೆಚ್.ಸಿ. ಗುಡ್ಡಪ್ಪ, ಟಿ.ದಾಸ್‍ಕರಿಯಪ್ಪ, ಶೀಲಾ ನಾಯಕ್, ಜೆ. ಅಮಾನುಲ್ಲಾಖಾನ್ ಮತ್ತಿತರರಿದ್ದರು.







