ರಾಷ್ಟ್ರೀಯ ಪಕ್ಷಗಳ ಆಡಳಿತದಿಂದ ದೇಶದ ಅಭಿವೃದ್ಧಿಗೆ ಮಾರಕ: ಎಚ್.ಡಿ. ದೇವೇಗೌಡ

ಚನ್ನಗಿರಿ, ಸೆ.5: ಎರಡೂ ರಾಷ್ಟ್ರೀಯ ಪಕ್ಷಗಳ ಅಧಿಕಾರ ನೀವೆಲ್ಲರೂ ನೋಡಿದ್ದೀರಿ. ಅವುಗಳು ಜನವಿರೋಧಿ ಆಡಳಿತ ನಡೆಸುತ್ತಾ, ದೇಶದ ಅಭಿವೃದ್ಧಿಗೆ ಮಾರಕವಾಗಿವೆ. ಆದ್ದರಿಂದ ಒಂದು ಬಾರಿ ಜೆಡಿಎಸ್ ಗೆಲ್ಲಿಸಿ, ರಾಜ್ಯಾಭಿವೃದ್ಧಿಗೆ ಬೆಂಬಲಿಸಿ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮನವಿ ಮಾಡಿದರು.
ತಾಲೂಕಿನ ತ್ಯಾವಣಿಗಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜೆಡಿಎಸ್ ಕಾರ್ಯಕಾರಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಅಹಿಂದ ಸಂಘಟನೆ ಹೆಸರೇಳಿಕೊಂಡು ಆಡಳಿತ ಚುಕ್ಕಾಣಿ ಹಿಡಿದಿದೆ. ಆದರೆ, ಈವರೆಗೂ ಶೋಷಿತವರ್ಗಕ್ಕೆ ಯಾವುದೇ ಪ್ರಗತಿಪೂರಕ ಕಾರ್ಯಗಳನ್ನು ಮಾಡಿಲ್ಲ. ಆದರೆ, ಜೆಡಿಎಸ್ ಪಕ್ಷ ಅಧಿಕಾರದಲ್ಲಿದ್ದಾಗ ನಾಯಕ ಸಮುದಾಯಕ್ಕೆ ಮೀಸಲಾತಿ ಸೌಲಭ್ಯ ಕಲ್ಪಿಸಿದ್ದಲ್ಲದೇ, ಅವರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿತ್ತು. ಈ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಜನತೆ ಗಮನದಲ್ಲಿಟ್ಟುಕೊಂಡು ಈ ಬಾರಿ ಜೆಡಿಎಸ್ ಪಕ್ಷಕ್ಕೆ ಬೆಂಬಲಿಸಬೇಕೆಂದು ಅವರು ಮನವಿ ಮಾಡಿದರು.
ಕೇಂದ್ರ ಸರ್ಕಾರ ಕಾರ್ಪೋರೇಟ್ ಸಂಸ್ಕೃತಿಗೆ ಮಾರುಹೋಗಿದ್ದು, ರೈತಪರ ಖಾಳಜಿ ಮರೆತಿದೆ ಎಂದು ಟೀಕಿಸಿದ ಅವರು, ಕೇಂದ್ರ ಹಣಕಾಸು ಸಚಿವರು ರೈತರ ಸಾಲ ಮನ್ನಾ ಮಾಡಲು ಕಿಂಚಿತ್ತೂ ಯೋಚಿಸಿಲ್ಲ. ಆದರೆ, ರಾಜ್ಯದ ಬಿಜೆಪಿ ಸಂಸದರು ಕೂಡಾ ರಾಜ್ಯಕ್ಕಾಗಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳದೇ ಪ್ರಧಾನಿ ಕೈಗೊಂಬೆಗಳಂತಾಗಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷ ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತರ ಎಲ್ಲಾ ಬ್ಯಾಂಕಗಳಲ್ಲಿನ ಸಾಲ ಮಾನ್ನ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.
ಈ ಸಂದರ್ಭ ಮಾಯಕೊಂಡ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಶೀಲಾನಾಯಕ್ ಅವರನ್ನು ಅಧಿಕೃತವಾಗಿ ಘೋಷಿಸಲಾಯಿತು.
ಸಭೆಯಲ್ಲಿ ಜಬಿವುಲ್ಲಾ ಖಾನ್, ಶಾಸಕರಾದ ಎಚ್.ಎಸ್.ಶಿವಶಂಕರ್, ರಮೇಶ ಬಾಬು, ಎಚ್.ಸಿ. ನೀರಾವರಿ, ಕಲ್ಲೇರುದ್ರೇಶ, ಹೊದಿಗೆರೆ ರಮೇಶ, ಬಿ. ಚಿದಾನಂದಪ್ಪ, ಎಚ್.ಸಿ.ಗುಡ್ಡಪ್ಪ, ಟಿ. ದಾಸಕರಿಯಪ್ಪ, ಜೆ. ಅಮಾನುಲ್ಲಾ ಖಾನ್, ಶೀಲಾ ನಾಯಕ್, ಬಿ. ನಾಗೇಶ್ವರ
ರಾವ್, ಬಾತಿ ಶಂಕರ್, ಅಂಜಿನಪ್ಪ, ಗಂಗಣ್ಣ, ಯೋಗೀಶ್, ಫಕ್ಕೀರಪ್ಪ, ಹೂವಿನಮಡು ಚಂದ್ರಪ್ಪ, ನೆಲ್ಕುದುರೆ ಹಾಲಪ್ಪ ಇದ್ದರು.







