ಗೌರಿ ಲಂಕೇಶ್ ಹತ್ಯೆಗೆ ಖಂಡನೆ: ತಡರಾತ್ರಿಯಲ್ಲಿ ಪ್ರಗತಿಪರರ ಪ್ರತಿಭಟನೆ
ಬೆಂಗಳೂರು, ಸೆ.5: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಗುಂಡಿಕ್ಕಿ ಹತ್ಯೆಗೈದಿರುವುದನ್ನು ಖಂಡಿಸಿ ಪ್ರಗತಿಪರರು, ಗೌರಿ ಲಂಕೇಶ್ ಅಭಿಮಾನಿಗಳು ತಡರಾತ್ರಿ ಪ್ರತಿಭಟನೆ ನಡೆಸಿದರು.
ಮಂಗಳವಾರ ರಾತ್ರಿ ನಗರದ ಕಾರ್ಪೊರೇಷನ್ ವೃತ್ತದಲ್ಲಿ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಗೌರಿ ಲಂಕೇಶ್ ಅವರನ್ನು ಗುಂಡಿಕ್ಕಿ ಹತ್ಯೆ ನಡೆಸಿದವರನ್ನು ಕೂಡಲೇ ರಾಜ್ಯ ಸರಕಾರ ಪತ್ತೆ ಹಚ್ಚಬೇಕು. ಅವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದೆಂದು ಪಟ್ಟುಹಿಡಿದರು.
ಹೋರಾಟಗಾರ್ತಿ ವರಲಕ್ಷ್ಮೀ ಮಾತನಾಡಿ, ವಿಚಾರವಾದಿಗಳ ಹತ್ಯೆ ನಿರಂತರವಾಗಿ ರಾಜ್ಯದಲ್ಲಿ ನಡೆಯುತ್ತಲೇ ಇವೆ. ಆದರೆ, ಅಧಿಕಾರ ನಡೆಸಿದ, ನಡೆಸುತ್ತಿರುವ ಸರಕಾರಗಳು ವಿಚಾರವಾದಿಗಳ ಕೊಲೆಗಾರರನನ್ನು ಬಂಧಿಸುವಲ್ಲಿ ವಿಫಲವಾಗಿವೆ ಎಂದು ಕಿಡಿಕಾರಿದರು.
ಎಸ್‌ಎಫ್‌ಐ ರಾಜ್ಯಾಧ್ಯಕ್ಷ ವಿ.ಅಂಬರೀಶ್ ಮಾತನಾಡಿ, ನಾಡಿನಲ್ಲಿ ಜಾತ್ಯತೀತ, ಪ್ರಜಾಸತ್ತಾತ್ಮಕ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದ ಗೌರಿ ಲಂಕೇಶ್ ಮೇಲೆ ಏಕಾಏಕಿ ದಾಳಿ ನಡೆಸಿ ಗುಂಡು ಹಾರಿಸುರುವುದು ಖಂಡನೀಯ. ರಾಜ್ಯದಲ್ಲಿ ಎಂ.ಎಂ.ಕಲಬುರ್ಗಿ ನಂತರ ಗೌರಿಯ ಮತ್ತೊಂದು ವಿಚಾರವಾದಿ ಕೊಲೆ ನಡೆದಿದೆ ಎಂದು ವಿಷಾದಿಸಿದರು.
ಪ್ರತಿಭಟನೆಯಲ್ಲಿ ಎಸ್‌ಎಫ್‌ಐ ರಾಜ್ಯ ಕಾರ್ಯದರ್ಶಿ ಗುರುರಾಜ್ ದೇಸಾಯಿ, ಬಸವರಾಜಪೂಜಾರ್, ರೈತ ಮುಖಂಡ ಮಾರುತಿ ಮಾನ್ಪಡೆ, ಲೇಖಕಿ ಕೆ.ನೀಲಾ, ಮಹಿಳಾ ಸಂಘಟನೆ ಮುಖಂಡರಾದ ಗೀತಾ ಸೇರಿ ಪ್ರಮುಖರಿದ್ದರು.







